ಚಿಕ್ಕಮಗಳೂರು: ಗಣಪತಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಸಭ್ಯತೆ ಮೆರೆದಿರುವ ವಿಡಿಯೋ ಬೆಳಕಿಗೆ ಬಂದಿದೆ. ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದ ಚತುರ್ಭುಜ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವತಿಯರ ತಂಡದಿಂದ ನೃತ್ಯ ನಡೆಯುತ್ತಿತ್ತು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯೊಬ್ಬ ವೇದಿಕೆಗೆ ಹತ್ತಿ ಯುವತಿಯರ ಮೇಲೆ ನೋಟುಗಳ ಮಳೆ ಸುರಿಸಿದ್ದಾನೆ.
ಈ ಸಂದರ್ಭದಲ್ಲಿ ಯುವತಿ ಕೈಮುಗಿದು ಬೇಡವೆಂದು ವಿನಂತಿಸಿದರೂ ಆತ ದುಡ್ಡು ಸುರಿಸುವ ವಿಡಿಯೋ ವೈರಲ್ ಆಗಿದೆ. ನೋಟುಗಳನ್ನು ಬೇರೆಯವರು ತೆಗೆದುಕೊಳ್ಳದಂತೆ ಮೂರ್ನಾಲ್ಕು ಯುವಕರು ಕಾವಲಿರುವುದು ದೃಶ್ಯದಲ್ಲಿ ಚಿತ್ರಿತವಾಗಿದೆ. ಈ ದುರ್ವರ್ತನೆಗೆ ಕೆಲ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭ್ಯತೆಯ ಕಾರ್ಯಕ್ರಮದಲ್ಲಿ ಅಸಭ್ಯತೆ ನಡೆಯುವುದು ನಾಚಿಕೆಗೇಡಿತನ ಎಂದು ಖಂಡಿಸಿದ್ದಾರೆ. ಕಳೆದೆರಡು ದಿನಗಳ ಹಿಂದೆ ನಡೆದ ಈ ಕಾರ್ಯಕ್ರಮದ ವಿಡಿಯೋ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಗಣಪತಿ ಹಬ್ಬದ ಪಾವಿತ್ರ್ಯಕ್ಕೆ ಧಕ್ಕೆ ತರುವಂತ ಘಟನೆಗಳು ಪುನರಾವರ್ತನೆ ಆಗದಂತೆ ಆಯೋಜಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವು ಸ್ಥಳೀಯರಲ್ಲಿ ಕೇಳಿ ಬರುತ್ತಿದೆ.
PublicNext
03/09/2025 10:40 am