ಉಡುಪಿ: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್(ಸಿಎಸ್‌ಎಲ್)ನ ಮಾಲಕತ್ವದ ಅಂಗಸಂಸ್ಥೆಯಾದ ಮಲ್ಪೆ ಬಂದರಿನಲ್ಲಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್, ನಾರ್ವೆಯ ವಿಲ್ಸನ್ ಎಎಸ್‌ಎ ಕಂಪೆನಿಗೆ ನಿರ್ಮಿಸುತ್ತಿರುವ 3,800 ಟಿಡಿಡಬ್ಲ್ಯೂ ಸಾಮಾನ್ಯ ಸರಕು ಸಾಗಣೆ ಹಡಗುಗಳ ಸರಣಿಯ ಮೂರನೇ ಹಡಗನ್ನು ಲೋಕಾರ್ಪಣೆ ಮಾಡಲಾಯಿತು. ಉಡುಪಿ ಶಿಪ್‌ಯಾರ್ಡ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಹಡಗನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕೃತವಾಗಿ ಜಲಾರ್ಪಣೆ ಮಾಡಿದರು.
ಈ ಹೊಸ ಶಿಪ್ 89.43 ಮೀಟರ್ ಉದ್ದ, 13.2 ಮೀಟರ್ ಅಗಲ ಹಾಗೂ 4.2 ಮೀಟರ್ ಆಳ ಹೊಂದಿದೆ. ನೆದರ್ಲ್ಯಾಂಡ್‌ನ ಕೋನೋಶಿಪ್ ಇಂಟರ್ನ್ಯಾಷನಲ್ ವಿನ್ಯಾಸಗೊಳಿಸಿದ ಈ ಶಿಪ್ ಯುರೋಪಿನ ಕರಾವಳಿ ನೀರಿನಲ್ಲಿ ಕಾರ್ಯನಿರ್ವಹಿಸಲು ತಕ್ಕಂತೆ, ಪರಿಸರ ಸ್ನೇಹಿ ಡೀಸೆಲ್-ಎಲೆಕ್ಟ್ರಿಕ್ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿದೆ.
ಈ ಸರಣಿಯ ಮೊದಲ ಹಡಗು ‘ವಿಲ್ಸನ್ ಇಕೋ-1’ ಕಳೆದ ಎಪ್ರಿಲ್ 23ರಂದು ಹಸ್ತಾಂತರಗೊಂಡು ಯುರೋಪಿನಲ್ಲಿ ಕಾರ್ಯಾಚರಿಸುತ್ತಿದೆ. ಎರಡನೇ ಹಡಗು ‘ವಿಲ್ಸನ್ ಇಕೋ-2’ ಅಂತಿಮ ಹಂತದಲ್ಲಿದ್ದು, ಸೆಪ್ಟೆಂಬರ್ 11 ರಂದು ಹಸ್ತಾಂತರಕ್ಕೆ ಸಿದ್ಧವಾಗಲಿದೆ.
PublicNext
07/09/2025 02:06 pm