ಶಿರಸಿ: ಶಿರಸಿ ತಾಲೂಕಿನ ಬೆಣ್ಣೆಹೊಳೆ ಫಾಲ್ಸ್‌ಗೆ ತೆರಳಿದ್ದ ಅರಣ್ಯ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಕಾಲು ಜಾರಿ ನೀರಿಗೆ ಬಿದ್ದ ಘಟನೆ ಜರುಗಿದೆ. ಓರ್ವ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ.ಈ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಕಾಣೆಯಾದ ವಿದ್ಯಾರ್ಥಿಯನ್ನು ರಾಹುಲ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ವಿದ್ಯಾರ್ಥಿ ಶ್ರೀನಿವಾಸ ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ರಾಹುಲ್ ಪತ್ತೆಗೆ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ಫಾಲ್ಸ್‌ಗೆ ತೆರಳಿದ್ದ ನಾಲ್ವರ ಪೈಕಿ ಇಬ್ಬರು ಕಾಲು ತೊಳೆಯಲು ಹೋಗಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ವೇಳೆ ಶ್ರೀನಿವಾಸ ಕಾಲು ಜಾರಿ ಕೆಳಗೆ ಬಿದ್ದಿದ್ದರಿಂದ, ಆತನನ್ನು ರಕ್ಷಿಸಲು ಹೋದ ರಾಹುಲ್ ಕೂಡಾ ನೀರಿಗೆ ಬಿದ್ದು ಕಾಣೆಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೊದಲು ಕಾಲು ಜಾರಿದ ಶ್ರೀನಿವಾಸ ಕಲ್ಲು ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದು, ಇನ್ನುಳಿದ ಇಬ್ಬರು ವಿದ್ಯಾರ್ಥಿಗಳು ಗ್ರಾಮಸ್ಥರ ನೆರವಿನಿಂದ ಹಗ್ಗದ ಮೂಲಕ ಆತನನ್ನು ಮೇಲಕ್ಕೆ ಎಳೆದಿದ್ದಾರೆ. ನಂತರ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸದ್ಯ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳದಲ್ಲೇ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
08/09/2025 08:25 am