ತುಮಕೂರು : ದೋಷಪೂರಿತ ದತ್ತಾಂಶವನ್ನು ಪರಿಗಣಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ಅವೈಜ್ಙಾನಿಕವಾಗಿ ವರ್ಗೀಕರಣ ಮಾಡಿದೆ ಎಂದು ಆಪಾದಿಸಿ, ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸೆ.10 ರಂದು ಭೋವಿ, ಬಂಜಾರ, ಕೊರಚ, ಕೊರಮ ಹಾಗೂ ಅಲೆಮಾರಿ ಸಮುದಾಯಗಳಿಂದ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಹಾಗೂ ಭೋವಿ ಸಂಘದ ಜಿಲ್ಲಾಧ್ಯಕ್ಷ ಓಂಕಾರ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.೧೫ರಿಂದ ಶೇ.೧೭ಕ್ಕೆ ಏರಿಕೆ ಮಾಡಿ ಐತಿಹಾಸಿಕ ತೀರ್ಮಾನ ಕೈಗೊಂಡಿತ್ತು. ಈ ತೀರ್ಮಾನದಿಂದ ಇಂದು ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಅನೇಕ ಕೋರ್ಸ್ಗಳಿಗೆ ಪ್ರವೇಶ ಪಡೆದಿದ್ದಾರೆ. ದಲಿತರ ಕಲ್ಯಾಣಕ್ಕಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ಬಿಜೆಪಿ ಸರ್ಕಾರದ ವಿರುದ್ಧ ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಇದು ಕೇವಲ ಆಶ್ವಾಸನೆ ಜಾರಿಗೆ ಬರುವುದಿಲ್ಲ ಎಂದು ಟೀಕೆ ಮಾಡಿತ್ತು, ಆದರೆ ಇಂದು ಅದೇ ಮೀಸಲಾತಿ ಪ್ರಮಾಣದಲ್ಲಿ ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸಲು ಅವೈಜ್ಙಾನಿಕವಾಗಿ ವರ್ಗೀಕರಣ ಮಾಡಿ ಗೊಂದಲ ಸೃಷ್ಠಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
Kshetra Samachara
08/09/2025 05:08 pm