ನವದೆಹಲಿ: ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆಗೆ ಮಸೀದಿ ಮೇಲಿನಿಂದ ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಗಲಭೆ ತಡೆಯುವ ಯೋಗ್ಯತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಹಿಂದಿನ ಗಲಭೆ ಪ್ರಕರಣಗಳಲ್ಲಿ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ನೀಡಿದ ಸರ್ಕಾರದ ನಿರ್ಲಕ್ಷ್ಯದಿಂದಲೇ ಇಂತಹ ಘಟನೆಗಳು ಮರುಕಳಿಸುತ್ತಿವೆ” ಎಂದು ಕಿಡಿ ಕಾರಿದ್ದಾರೆ.
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಅದರ ಪರಿಣಾಮವೇ ಕಲ್ಲು ತೂರಾಟ ನಡೆದಿದೆ ಎಂದು ಹೇಳಿದರು.
ಅಷ್ಟೇ ಅಲ್ಲದೆ, ಸೋಮವಾರ ಬೆಳಗ್ಗೆ ಗಣೇಶ ವಿಸರ್ಜನೆಗೆ ಹೊರಟ ಅಮಾಯಕರ ಮೇಲೆ ಪೊಲೀಸರೇ ಲಾಠಿ ಪ್ರಹಾರ ನಡೆಸಿದ್ದಾರೆ. ಇದು ಸರ್ಕಾರದ ಹಿಂದೂ ವಿರೋಧಿ ಮನೋಭಾವವನ್ನು ಮತ್ತೊಮ್ಮೆ ಬಹಿರಂಗಪಡಿಸುತ್ತದೆ ಎಂದು ಜೋಶಿ ಕಿಡಿಕಾರಿದರು.
ಹಿಂದೂ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಗಲಭೆ ತಡೆಯಲು ಸರ್ಕಾರಕ್ಕೆ ಯೋಗ್ಯತೆಯೇ ಇಲ್ಲ. ಬದಲಾಗಿ, ಅಮಾಯಕರನ್ನೇ ಗುರಿಯಾಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ಹಿಂದೆ ಪೊಲೀಸ್ ಠಾಣೆ ಸುಟ್ಟು, ಪೊಲೀಸರನ್ನೇ ಕೊಲ್ಲಲು ಪ್ರಯತ್ನಿಸಿದ ಪ್ರಕರಣಗಳನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ಕೋಮು ಗಲಭೆಯಲ್ಲಿ PFI ಲಿಂಕ್ ಇರುವ ಅನೇಕ ಪ್ರಕರಣಗಳನ್ನು ಹಿಂಪಡೆದ ಪರಿಣಾಮ ಮತಾಂಧ ಕಿಡಿಗೇಡಿಗಳಿಗೆ ಪ್ರೋತ್ಸಾಹ ಸಿಕ್ಕಂತಾಗಿದೆ. ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರ ತಲೆಬಾಗುತ್ತಿರುವುದೇ ಇಂತಹ ಘಟನೆಗಳ ಮರುಕಳಿಗೆ ಕಾರಣ” ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದರು.
PublicNext
08/09/2025 07:23 pm