ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ 10 ಕೋಟಿ ಅನುದಾನ ಬಂದಿದ್ದು, ಅದನ್ನು ಪಾಲಿಕೆ ಸದಸ್ಯರಿಗೆ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಮೇಯರ್ ಜ್ಯೋತಿ ಪಾಟೀಲ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಾಸಕ ವಿನಯ್ ಕುಲಕರ್ಣಿ ಅವರ ಮತಕ್ಷೇತ್ರ ವ್ಯಾಪ್ತಿಗೆ 9 ವಾರ್ಡುಗಳು ಬರುತ್ತವೆ. ಈ ವಾರ್ಡುಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದೆ. ಸರ್ಕಾರದಿಂದ ಬಂದಿರುವ 10 ಕೋಟಿ ಅನುದಾನವನ್ನು ಪಾಲಿಕೆ ಸದಸ್ಯರಿಗೆ ಹಂಚಿಕೆ ಮಾಡಿ ಅಭಿವೃದ್ಧಿ ಕೆಲಸ ಮಾಡಬೇಕಿದೆ. ಆದರೆ, ಮೇಯರ್ ಅವರು ಪಾಲಿಕೆ ಸದಸ್ಯರಿಗೆ ಸರ್ಕಾರದಿಂದ ಬಂದ ಅನುದಾನವನ್ನೇ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರು ಮೇಯರ್ ಅವರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮೇಯರ್ ಜ್ಯೋತಿ ಪಾಟೀಲ ಅವರ ಕಚೇರಿ ಒಳನುಗ್ಗಲು ಯತ್ನಿಸಿದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ಕೊಡಲಿಲ್ಲ. ಈ ವೇಳೆ ಪಾಲಿಕೆ ಬಿಜೆಪಿ ಸದಸ್ಯ ಶಂಕರ ಶೆಳಕೆ, ಪಾಲಿಕೆಯ ನಾಮನಿರ್ದೇಶಿತ ಸದಸ್ಯ ತುಳಸಪ್ಪ ಪೂಜಾರ ಅವರಿಗೆ ರೌಡಿಶೀಟರ್ ಎಂಬ ಪದ ಬಳಸಿದ್ದರಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು, ರೌಡಿಶೀಟರ್ ಎಂದು ಪದ ಬಳಸಿದ್ದೇಕೆ? ಎಂದು ಮೇಯರ್ ಕಚೇರಿ ಎದುರೇ ಹೈಡ್ರಾಮಾ ಸೃಷ್ಟಿಸಿದರು.
ಕೆಲ ಹೊತ್ತಿನ ನಂತರ ಪ್ರತಿಭಟನೆ ಕೈಬಿಟ್ಟ ಕೈ ಕಾರ್ಯಕರ್ತರು, ಪಾಲಿಕೆಯಿಂದ ಕೂಡಲೇ ಸದಸ್ಯರಿಗೆ ಅನುದಾನ ಮಂಜೂರು ಮಾಡಬೇಕು ಇಲ್ಲದೇ ಹೋದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಇನ್ನು ತುಳಸಪ್ಪ ವಿರುದ್ಧ ರೌಡಿ ಶೀಟರ್ ಪದ ಬಳಕೆ ಮಾಡಿದ ಆರೋಪದ ಮೇಲೆ ತುಳಸಪ್ಪ ಅವರು ಶಂಕರ ಶೆಳಕೆ ಮೇಲೆ ದೂರು ದಾಖಲಿಸಲು ಮುಂದಾಗಿದ್ದು, ಇದು ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/09/2025 09:20 pm