ಧಾರವಾಡ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸಿದ್ದು, ಅರ್ಹರನ್ನು ನಿರ್ಲಕ್ಷಿಸಿದೆ ಹಾಗೂ ಉತ್ತರ ಕರ್ನಾಟಕಕ್ಕೆ ತೀವ್ರ ಅನ್ಯಾಯ ಎಸಗಿದೆ ಎಂದು ಬಿಜೆಪಿ ಮುಖಂಡ ಪಿ.ಎಚ್. ನೀರಲಕೇರಿ ಗಂಭೀರ ಆರೋಪ ಮಾಡಿದ್ದಾರೆ.
ಪ್ರಶಸ್ತಿ ಆಯ್ಕೆಯಲ್ಲಿ ಗೊಂದಲ ಮತ್ತು ಅನ್ಯಾಯ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಪ್ರಶಸ್ತಿ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವು ಜಿಲ್ಲೆಗಳಿಗೆ ಮಾತ್ರ ಪ್ರಾತಿನಿಧ್ಯ ನೀಡಿ, ಇನ್ನುಳಿದ ಹಲವು ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಪ್ರಶಸ್ತಿ ಮಾರಾಟದ ಆರೋಪ
ಪ್ರಶಸ್ತಿ ಪುರಸ್ಕೃತರ ನಿಜವಾದ ಹಿನ್ನೆಲೆ, ಹುಟ್ಟೂರು ಮತ್ತು ವಿಳಾಸದ ಬಗ್ಗೆ ಮಾಹಿತಿ ಮುಚ್ಚಿಡುವ ಅಗತ್ಯವೇನಿದೆ? ಹಣಕ್ಕಾಗಿ ಪ್ರಶಸ್ತಿಗಳನ್ನು ಮಾರಾಟ ಮಾಡಲಾಗಿದೆಯೇ ಎಂದು ನೀರಲಕೇರಿ ನೇರವಾಗಿ ಪ್ರಶ್ನಿಸಿದರು.
ಜಿಲ್ಲಾವಾರು ತಾರತಮ್ಯ ಮತ್ತು ಸ್ಪಷ್ಟನೆಗೆ ಆಗ್ರಹ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರಿಗೆ ಪ್ರಶಸ್ತಿ ಘೋಷಿಸುವ ಮೂಲಕ ಪ್ರಾಮಾಣಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮೈಸೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ಅತಿ ಹೆಚ್ಚು ಪ್ರಶಸ್ತಿಗಳು ಲಭಿಸಿದ್ದರೆ, ಧಾರವಾಡಕ್ಕೆ ಸಾಹಿತ್ಯ, ಸಂಗೀತ, ಸಾಮಾಜಿಕ ಸೇವೆ ಕ್ಷೇತ್ರಗಳಲ್ಲಿ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಗದಗ ಜಿಲ್ಲೆಗೂ ಸಂಪೂರ್ಣ ನಿರ್ಲಕ್ಷ್ಯ ತೋರಿಸಲಾಗಿದೆ.
ರಾಜ್ಯದಲ್ಲಿ ನ್ಯಾಯವಾದಿಗಳ ಸೇವೆಯನ್ನು ಪರಿಗಣಿಸಿಯೇ ಇಲ್ಲದಂತಾಗಿದೆ. ಒಂದು ಜಿಲ್ಲೆಗೆ ಪ್ರಾತಿನಿಧ್ಯ ನೀಡಿ ಮತ್ತೊಂದು ಜಿಲ್ಲೆಯ ಅವಕಾಶವನ್ನು ಕಸಿದುಕೊಳ್ಳುವುದು ಎಷ್ಟು ಸರಿ? ಯಾರನ್ನೋ ಯಾವುದೋ ಜಿಲ್ಲೆಗೆ ತೋರಿಸಿ ಪ್ರಶಸ್ತಿ ನೀಡುವುದು ಸರಿಯಲ್ಲ. ಕನ್ನಡ ನಾಡು-ನುಡಿ ಹೆಸರಿನಲ್ಲಿ ನೀಡುವ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಮಾನದಂಡಗಳ ಕುರಿತು ರಾಜ್ಯ ಸರ್ಕಾರ ಕೂಡಲೇ ಉತ್ತರ ನೀಡಬೇಕು ಎಂದು ಪಿ.ಎಚ್. ನೀರಲಕೇರಿ ತೀವ್ರವಾಗಿ ಆಗ್ರಹಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/10/2025 07:43 pm