ವಿಜಯಪುರ: ಗೋಳಗುಮ್ಮಟ ನಗರಿ ವಿಜಯಪುರದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಬಣ್ಣ ಬಣ್ಣದ ಟಿ-ಶರ್ಟ್ ಗಳನ್ನು ಧರಿಸಿ ರೋಡಿಗಿಳಿದ ಜನ, ಮೈಕೊರೆಯುವ ಚಳಿಯನ್ನು ಲೆಕ್ಕಿಸದೆ ನಾಮುಂದು ತಾಮುಂದು ಅಂತಾ ಓಡಲಾರಂಭಿಸಿದರು! ವೃಕ್ಷ ಅಭಿಯಾನ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಬಾರಿಯ "ವೃಕ್ಷಥಾನ್ ಪಾರಂಪರಿಕ ಓಟ"ಕ್ಕೆಂದು ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಹೆಜ್ಜೆ ಹಾಕಿದರು. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸೇರಿದಂತೆ ಮೊದಲಾದ ಗಣ್ಯರು ಹಸಿರಿಗಾಗಿನ ಓಟಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
1ರಿಂದ 5, 5ರಿಂದ 10 ಮತ್ತು 10 ರಿಂದ 20 ಕಿ.ಮೀ.ಗಳವರೆಗೆ ಎಂದು ಆಯೋಜಿಸಲಾಗಿದ್ದ ಮೂರು ಪ್ರಕಾರದ ಓಟದಲ್ಲಿ ಎಲ್ಲ ವಯೋಮಾನದವರೂ ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡು ಬಂತು. ಈ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು. ಜೊತೆಗೆ ಗೋಳಗುಮ್ಮಟ ಖ್ಯಾತಿಯ ವಿಜಯಪುರಕ್ಕೆ ಬಹುಕಾಲದಿಂದಲೂ ಅಂಟಿಕೊಂಡಿರುವ ಬರದ ನಾಡೆಂಬ ಹಣೆಪಟ್ಟಿಯನ್ನು ಅಳಿಸುವ ಪಣ ತೊಟ್ಟಂತಿತ್ತು.
ವೃಕ್ಷಥಾನ್ ಅಭಿಯಾನದ ಪರಿಣಾಮ ನಗರದ ರಸ್ತೆಗಳ ತುಂಬ ಜನ ಸಂದಣಿಯಿಂದಾಗಿ ಕೆಲ ಹೊತ್ತು ವಾಹನಗಳ ಸಂಚಾರ ವಿರಳವಾಗಿದ್ದುದು ಕಂಡು ಬಂತು. 2016ರಲ್ಲಿ ಆರಂಭಗೊಂಡ ವೃಕ್ಷಥಾನ್ ಅಭಿಯಾನದ ಮೂಲಕ ವಿಜಯಪುರದಲ್ಲಿ ಇಲ್ಲಿಯವರೆಗೆ ಕೋಟಿ ವೃಕ್ಷಗಳನ್ನು ನೆಟ್ಟು ಪೋಷಿಸಲಾಗಿದ್ದು, ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ನಮ್ಮ ಪ್ರತಿಷ್ಠಾನದಿಂದ ಐದು ಕೋಟಿಗಳಷ್ಟು ಗಿಡ ನೆಡುವ ಗುರಿ ಹೊಂದಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದರು.
ಬಳಿಕ ವೃಕ್ಷಥಾನ್ ಓಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಎಂಎಲ್ ಸಿ ಸುನೀಲ್ ಗೌಡ ಪಾಟೀಲ್, ವೃಕ್ಷ ಅಭಿಯಾನ ಪ್ರತಿಷ್ಠಾನದ ಅಧ್ಯಕ್ಷ ಮಹಾಂತೇಶ್ ಬಿರಾದಾರ್, ವಿಜಯಪುರ ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದ ಮೆಗಾ ಈವೆಂಟ್ ಯಶಸ್ವಿಯಾಯಿತು.
-ಚೆನ್ನವೀರ ಸಗರನಾಳ್ ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
PublicNext
08/12/2025 08:37 am