ಮಂಗಳೂರು: ಕಾಂತಾರ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೇ ಹೊಂಬಾಳೆ ಚಿತ್ರ ತಂಡ ನಟ, ನಿರ್ದೇಶಕ ರಿಷಭ್ ಶೆಟ್ಟಿಯವರ ನೇತೃತ್ವದಲ್ಲಿ ಮಂಗಳೂರಿನ ಬಾರೆಬೈಲಿನ ಜಾರಂದಾಯ ದೈವಸ್ಥಾನದಲ್ಲಿ ಪಂಜುರ್ಲಿ ದೈವಕ್ಕೆ ಹರಕೆಯ ನೇಮ ಒಪ್ಪಿಸಿದೆ. ಈ ನೇಮದಲ್ಲಿ ದೈವ ನರ್ತಕನ ಅತಿರೇಕದ ವರ್ತನೆ ದೈವಾರಾಧಕರ ತೀವ್ರ ಟೀಕೆಗೆ ಗುರಿಯಾಗಿದೆ.ದೈವಾರಾಧನೆ, ನೇಮ, ಕೋಲಗಳ ವಿಚಾರದಲ್ಲಿ ಹಿಂದಿನಿಂದ ಬಂದ ಕಟ್ಟುಪಾಡುಗಳಿವೆ. ಇಂತಹ ಕಟ್ಟುಪಾಡುಗಳನ್ನು ಗಾಳಿಗೆ ತೂರಿ ಈ ನೇಮ ನಡೆದಿದೆ. ದೈವ ನರ್ತಕ ಮುಕೇಶ್ ಗಂಧಕಾಡು ಅವರು ಮಾತ್ರವಲ್ಲದೆ ರಿಷಭ್ ಶೆಟ್ಟಿಯವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ನೇಮಕ್ಕೆ ಮೊದಲು ದೈವ ನರ್ತಕ ಎಣ್ಣೆಬೂಲ್ಯ ತೆಗೆದುಕೊಳ್ಳುವ ಸಂದರ್ಭದ ದೃಶ್ಯ ಮಾಧ್ಯಮದವರ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂದರ್ಭ ದೈವ ನರ್ತಕ ಮುಕೇಶ್ ಗಂಧಕಾಡು ಅವರು ನಟ ರಿಷಭ್ ಶೆಟ್ಟಿಯವರ ಮಡಿಲಲ್ಲಿ ಮಲಗಿದ್ದು, ದೈವಸ್ಥಾನದೊಳಗಡೆ ಪ್ರವೇಶಿಸಿ ದೈವದ ಆಯುಧ ಕಡ್ತಲೆಯನ್ನು ತೆಗೆದುಕೊಂಡು ತಲೆಗೆ ಬಡಿದುಕೊಂಡಿರುವುದು, ಎಣ್ಣೆ ಬೂಲ್ಯ ತೆಗೆದುಕೊಳ್ಳಲು ಬಳಸಬೇಕಿದ್ದ ಬಟ್ಟಲನ್ನು ಹಣೆಗೆ, ತಲೆಗೆ ಬಡಿದುಕೊಂಡಿರುವುದು, ದೈವ ನರ್ತನಕ್ಕೆ ತೊಟ್ಟುಕೊಳ್ಳುವ ವಸ್ತ್ರಭೂಷಣಕ್ಕೆ ಬದಲು ಕೆಂಪು ಬಟ್ಟೆ ಮತ್ತು ಬರಿ ಮೈಯಲ್ಲಿ ನರ್ತಿಸುತ್ತಾ ಪಲ್ಟಿ ಹೊಡೆದಿರುವುದು ದೈವಾರಾಧಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ದೈವಾರಾಧಕ ತಮ್ಮಣ್ಣ ಶೆಟ್ಟಿ ಪ್ರತಿಕ್ರಿಯಿಸಿ, ದೈವದ ಸೇವೆ ಮಾಡಬೇಕಾದವರೇ ಇಂತಹ ವಿಕೃತಿ ಮೆರೆಯುತ್ತಿರುವುದು ಬಹುದೊಡ್ಡ ತಪ್ಪು. ಹರಕೆಯ ನೇಮ ಎಂದು ಇರುವುದು ರಾಜನ್ ದೈವಗಳಿಗಿಲ್ಲ. ಬರಿಮೈಯಲ್ಲಿ ನರ್ತಿಸುವುದು, ಪಲ್ಟಿ ಹೊಡೆಯುವುದೆಲ್ಲ ಪಂಜುರ್ಲಿ ಕೋಲದಲ್ಲಿಲ್ಲ. ದೈವಾರಾಧನೆ ಕರಾವಳಿ ಜನರ ಆರಾಧನಾ ಕಲೆಯಾಗಿದ್ದು, ಇದನ್ನು ಮಾರ್ಕೆಟ್ ಮಾಡಬೇಕಿಲ್ಲ. ಅದರ ನೆಪದಲ್ಲಿ ರಿಷಭ್ ಶೆಟ್ಟಿ ಬಿಸಿನೆಸ್ ಮಾಡುವುದೂ ಬೇಕಿಲ್ಲ ಎಂದಿದ್ದಾರೆ.
PublicNext
10/12/2025 08:49 am