ಉಡುಪಿ: ಪ್ರಸ್ತುತ ಜಗತ್ತು ಸಂಘರ್ಷ, ವಿಭಜನೆ ಮತ್ತು ಅನಿಶ್ಚಿತತೆಯಿಂದ ಗುರುತಿಸಲ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಭಾರತದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಭಾರತವೂ ಸದಾ ಶಾಂತಿಯ ಸಂದೇಶ ಸಾರುತ್ತಲೇ ಬಂದಿದೆ. ಶಾಂತಿ ಎಂದರೆ ಕೇವಲ ಸಂಘರ್ಷ ಮಾಡದೇ ಇರುವುದು ಮಾತ್ರವಲ್ಲ. ಅದು ಪರಸ್ಪರ ಗೌರವ, ಹೊಣೆಗಾರಿಕೆ ಮತ್ತು ಸಹಕಾರದ ಸಾನ್ನಿಧ್ಯವಾಗಿದೆ. ಇದನ್ನು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಒಬ್ಬರಿಗೊಬ್ಬರು ಸಹಕಾರದಿಂದ ಮುನ್ನೆಡೆದರೆ ಎಲ್ಲರೂ ಉತ್ತಮವಾದುದನ್ನೇ ಸಾಧಿಸಬಹುದು ಎಂದು ಆಂಧ್ರ ಪ್ರದೇಶದ ರಾಜ್ಯಪಾಲ ನ್ಯಾ। ಅಬ್ದುಲ್ ನಜೀರ್ ಹೇಳಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಶನಿವಾರ ನಡೆದ ವಿಶ್ವಶಾಂತಿ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಮನುಷ್ಯ ಭಾವನಾತ್ಮಕ ಮತ್ತು ಪ್ರಾದೇಶಿಕ ಸಂಕುಚಿತತೆ ಬಿಡಬೇಕು. ಸ್ವಾರ್ಥ ರಹಿತ ಚಿಂತನೆಯಿಂದ ಶಾಂತಿ ಸ್ಥಾಪನೆ ಸಾಧ್ಯ. ಕುರುಡು ಮೋಹವು ಮಹಾಭಾರತದ ಯುದ್ಧಕ್ಕೂ ಕಾರಣವಾಗಿತ್ತು. ಗೀತೆಯ ಬೋಧನೆ ಮೂಲಕ ಶ್ರೀ ಕೃಷ್ಣನು ಧರ್ಮಸ್ಥಾಪನೆ ಮಾಡಿದ್ದಾನೆ. ಜಗತ್ತು ತಲ್ಲಣಗೊಂಡಿದೆ ಮತ್ತು ಅಶಾಂತಿಯಿಂದ ಸಾಗುತ್ತಿದೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ಸೌಹಾರ್ದತೆ, ವಿಶ್ವಾಸ ಹಾಗೂ ವಿನಯತೆ ಇದ್ದಾಗ ಮಾತ್ರ ಸಾಧ್ಯ. ನಾನೇ ಶ್ರೇಷ್ಠ ಎಂಬ ಮಾನಸಿಕತೆ ಬಿಡಬೇಕು. ನಾವೆಲ್ಲರೂ ಮಾನವೀಯತೆಯ ಸೇವಕರು ಎಂಬುದು ಅರ್ಥೈಸಿಕೊಂಡಾಗ ಶಾಂತಿ ಸ್ಥಾಪನೆ ಸಾಧ್ಯ ಎಂದರು.
ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಅಮೆರಿಕದ ವರ್ಲ್ಡ್ ರಿಲೀಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ| ವಿಲಿಯಂ ಎಫ್. ವಿಂಡ್ಲೆ, ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಶಾಂತಿ ಸಂದೇಶ ನೀಡಿದರು. ಉಡುಪಿ ಶ್ರೀ ಕೃಷ್ಣ ದೇವಾಲಯದ ಸಾಂಸ್ಕೃತಿಕ ಸಿರಿ, ಕಲ್ಚರಲ್ ಹೆರಿಟೇಜ್ ಆಫ್ ಉಡುಪಿ ಶ್ರೀ ಕೃಷ್ಣಮಠ, ಸರ್ವಮೂಲ ಭಾವಪರಿಚಯ, ಗೀತಾಮೃತಸಾರ ಪುಸ್ತಕ ಲೋಕಾರ್ಪಣೆ ನಡೆಯಿತು.
PublicNext
14/12/2025 01:51 pm