ಹೊಸದಿಲ್ಲಿ: 2014ರ ಬಳಿಕ ದೇಶದಲ್ಲಿ ನಡೆದ ಬಹುತೇಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಾದ ಇವಿಎಂಗಳ ಕುರಿತು ವಿಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಲೇ ಬಂದಿವೆ. ಚುನಾವಣೆಯಲ್ಲಿ ಜಯಗಳಿಸಿದಾಗ ಜನಾಭಿಪ್ರಾಯವನ್ನು ಒಪ್ಪಿಕೊಳ್ಳುವ ವಿಪಕ್ಷಗಳು, ಸೋಲಿನ ಸಂದರ್ಭದಲ್ಲಿ ಇವಿಎಂ ದೋಷ ಎಂದು ಆರೋಪಿಸುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇಂತಹ ಸಂದರ್ಭದಲ್ಲೇ, ವಿಪಕ್ಷಗಳ ಇವಿಎಂ ವಿರೋಧಿ ನಿಲುವಿಗೆ ಎನ್‌ಸಿಪಿ–ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ ತೀವ್ರ ತಿರುಗೇಟು ನೀಡಿದ್ದಾರೆ. ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, “ನಾನು ಇದೇ ಇವಿಎಂ ವ್ಯವಸ್ಥೆಯ ಮೂಲಕವೇ ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಇವಿಎಂ ವ್ಯವಸ್ಥೆಯನ್ನು ವಿರೋಧಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ನಾನು ಇವಿಎಂ ಅಥವಾ ವಿವಿಪ್ಯಾಟ್‌ಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದಿಲ್ಲ. ಚುನಾವಣಾ ಸುಧಾರಣೆಗಳ ಬಗ್ಗೆ ಚರ್ಚೆ ನಡೆಯುವಾಗ ಕೇವಲ ಇವಿಎಂಗಳನ್ನು ದೋಷಿಸುವುದು ಸರಿಯಲ್ಲ” ಎಂದು ಅವರು ಹೇಳಿದರು. ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದಿಂದ ನಾಲ್ಕು ಅವಧಿಗೆ ಸಂಸದರಾಗಿರುವ ಸುಪ್ರಿಯಾ ಸುಳೆ ಅವರ ಈ ಹೇಳಿಕೆ ವಿಪಕ್ಷ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಲೋಕಸಭೆಯಲ್ಲಿ ಇದೇ ವಿಷಯದ ಮೇಲೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವೋಟ್ ಚೋರಿ ಹಾಗೂ ಇವಿಎಂ ವಿರುದ್ಧ ಆರೋಪ ಮಾಡಿದ್ದರೆ, ಅದಕ್ಕೆ ತಿರುಗೇಟು ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಇವಿಎಂ ವ್ಯವಸ್ಥೆಯನ್ನು ದೇಶಕ್ಕೆ ತಂದಿದ್ದೇ ಕಾಂಗ್ರೆಸ್” ಎಂದು ಸ್ಪಷ್ಟಪಡಿಸಿದ್ದರು.
ಈ ಎಲ್ಲ ಹೇಳಿಕೆಗಳ ನಡುವೆಯೇ, ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿ–ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ ಇವಿಎಂ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, ವಿಪಕ್ಷಗಳೊಳಗಿನ ಭಿನ್ನ ನಿಲುವುಗಳನ್ನು ಬಹಿರಂಗಪಡಿಸಿದೆ.
PublicNext
16/12/2025 09:52 pm