ನೆಲಮಂಗಲ: ರೈತರಿಗೆ ಸಬ್ಸಿಡಿಯಲ್ಲಿ ನೀಡಬೇಕಾದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದಂಧೆ ನೆಲಮಂಗಲದಲ್ಲಿ ಬಯಲಾಗಿದೆ. ಖಾಸಗಿ ಗೋದಾಮಿನ ಮೇಲೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿ ಟನ್ ಗಟ್ಟಲೆ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಯೂರಿಯಾ ಸಿಗದೆ ರೈತರು ರೋಸಿ ಹೋಗಿದ್ದಾರೆ. ರೈತರು ಯೂರಿಯಾ ಬೇಕೇ ಬೇಕು ಅಂತಾ ಪ್ರತಿಭಟನೆಗಳು ಮಾಡಿದ್ರು.ಇಲ್ಲಿ ಅದೇ ಯೂರಿಯಾ ಕಾಳಸಂತೆಯಲ್ಲಿ ಮಾರಾಟ ಮಾಡ್ತಿದ್ದ ದಂಧೆ ಬೆಳಕಿಗೆ ಬಂದಿದೆ. ಹೌದು ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ಗೆಜ್ಜಗದಹಳ್ಳಿ ಬಳಿಯ ಗೋಡೌನ್ನಲ್ಲಿ, ಕೇಂದ್ರ ಸರ್ಕಾರದಿಂದ ಸಬ್ಸಿಡಿಯಲ್ಲಿ ರೈತರಿಗಾಗಿ ನೀಡುವ ಯೂರಿಯಾವನ್ನು ಕದ್ದು ಅಕ್ರಮವಾಗಿ ಶೇಖರಿಸಿದ್ದರು. ಜಾಲದ ಬೆನ್ನತ್ತಿದ್ದ ಅಧಿಕಾರಿಗಳಿಗೆ ಸಿಕ್ಕಿದ್ದು ಅತಿ ದೊಡ್ಡ ಬೇಟೆ.
ಹೌದು, ಒಂದಲ್ಲ ಎರಡಲ್ಲ ಬರೋಬ್ಬರಿ 1 ಲಕ್ಷದ 90 ಸಾವಿರದ 125 ಕೆಜಿ ಸರ್ಕಾರದ ಯೂರಿಯಾ ಕಾಳಸಂತೆಯಲ್ಲಿ ಲಾಕ್ ಆಗಿದೆ. ಕೇಂದ್ರ ಸರ್ಕಾರದಿಂದ ಸಬ್ಸಿಡಿ ಮುಖಾಂತರ 246 ರೂಪಾಯಿಗೆ ರೈತರಿಗೆ ಈ ಯೂರಿಯಾವನ್ನು ಕೊಡಲಾಗುತ್ತೆ. ಆದ್ರೆ ಖದೀಮರು ಮಧ್ಯದಲ್ಲಿ ಡೀಲಿಂಗ್ ನಡೆಸಿ 2 ರಿಂದ 3 ಸಾವಿರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡ್ತಾರೆ. ತಮಿಳುನಾಡಿನಲ್ಲಿ ಇದರ ಸುಳಿವು ಪಡೆದಿದ್ದ DRI ಅಧಿಕಾರಿಗಳು ಬೆನ್ನತ್ತಿದ್ದಾಗ ಇದರ ಜಾಡು ನೆಲಮಂಗಲದ ಬಳಿ ಸಿಕ್ಕಿಹಾಕಿಕೊಂಡಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಶೇಖರಿಸಿಟ್ಟಿದ್ದ ಯೂರಿಯಾವನ್ನು ಜೊತೆಗೆ ಗೋಡೌನ್ ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಕೇರಳ ಮೂಲದ ತಜೀರ್ ಖಾನ್ ಯೂಸುಫ್ ಎಂಬಾತ 6 ತಿಂಗಳ ಹಿಂದೆ, 40 ಸಾವಿರಕ್ಕೆ ಗೋಡೌನ್ ಬಾಡಿಗೆ ಪಡೆದಿದ್ದ ಬಗ್ಗೆ ಮಾಹಿತಿ ಕಲೆ ಹಾಕಿ ವಶಕ್ಕೆ ಪಡೆದಿದ್ದಾರೆ. ಕೇಂದ್ರ ಸಬ್ಸಿಡಿ ಯೂರಿಯಾವನ್ನು ಈ ಗೋಡೌನ್ಗೆ ತಂದ ಬಳಿಕ ಬೇರೆ 50 ಕೆಜಿ ಚೀಲವನ್ನಾಗಿ ಮಾಡಿ 2 ಸಾವಿರಕ್ಕೆ ಮಾರಾಟ ಮಾಡ್ತಿದ್ದರು.ಈ ದಂಧೆಯಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರ ಎಂಬ ಅನುಮಾನ ಕೂಡ ಮೂಡಿದೆ. ಇದೀಗ DRI ಅಧಿಕಾರಿಗಳು ಈ ದಂಧೆಯ ಬೇಟೆಯಾಡಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ರೈತರಿಗೆ ಸಿಗಬೇಕಿದ್ದ ಯೂರಿಯಾ ಈ ರೀತಿ ಕಾಳಸಂತೆ ಪಾಲಾಗುತ್ತಿದ್ದದನ್ನ ಸದ್ಯ ಒಂದು ಹಂತದಲ್ಲಿ ಅಧಿಕಾರಿಗಳು ತಡೆಗಟ್ಟಿದ್ದು, ದೇಶವ್ಯಾಪಿ ಆವರಿಸಿರುವ ಈ ಜಾಲವನ್ನ ಭೇದಿಸಬೇಕಿದೆ.
PublicNext
16/12/2025 10:01 pm