ಬೆಂಗಳೂರು: ದಾಖಲೆ ಸೃಷ್ಟಿಸಿದ ಲೋಕ ಅದಾಲತ್ ಕೋಟ್ಯಂತರ ಪ್ರಕರಣಗಳಿಗೆ ಮುಕ್ತಿ ನೀಡಿ ನೊಂದವರಿಗೆ ನ್ಯಾಯ ನೀಡಿದೆ ಈ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (KSLSA) ಅಧ್ಯಕ್ಷೆ, ನ್ಯಾಯಮೂರ್ತಿ ಶ್ರೀಮತಿ ಅನು ಶಿವರಾಮನ್ ಅವರು ಸುದ್ದಿಗೋಷ್ಠಿ ನಡೆಸಿ, ಪ್ರಾಧಿಕಾರ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳು ಮತ್ತು ಇತ್ತೀಚಿನ ಲೋಕ ಅದಾಲತ್‌ನ ಯಶಸ್ಸಿನ ಕುರಿತು ಮಾಹಿತಿ ನೀಡಿದರು.
ಕಳೆದ 13ನೇ ತಾರೀಖಿನಂದು ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 1,04,66,237 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಮೂರ್ತಿ ಅನು ಶಿವರಾಮನ್ ತಿಳಿಸಿದರು. ಇತ್ಯರ್ಥಗೊಂಡ ಪ್ರಕರಣಗಳಲ್ಲಿ ವಿವಿಧ ಸ್ವರೂಪದ ವ್ಯಾಜ್ಯಗಳು ಸೇರಿವೆ:
* 2,469 ವೈವಾಹಿಕ ಪ್ರಕರಣಗಳು
* 3,673 ವಿಭಾಗ ದಾವೆಗಳು
* 4,660 ಮೋಟಾರು ವಾಹನ ಅಪಘಾತ ಪರಿಹಾರ (MVC) ಪ್ರಕರಣಗಳು
* 13,517 ಚೆಕ್ ಬೌನ್ಸ್ ಪ್ರಕರಣಗಳು
* 18 ರೇರಾ (RERA) ಪ್ರಕರಣಗಳು ಸೇರಿದಂತೆ ಇತರೆ ಹಲವು ಪ್ರಕರಣಗಳು.
ಈ ಲೋಕ ಅದಾಲತ್‌ನಲ್ಲಿ ಶೇ. 50ರಷ್ಟು ರಿಯಾಯಿತಿ ಅಡಿಯಲ್ಲಿ 24,29,461 ಟ್ರಾಫಿಕ್ ಫೈನ್ ಪ್ರಕರಣಗಳನ್ನೂ ಸಹ ಇತ್ಯರ್ಥಪಡಿಸಲಾಗಿದೆ.
ಇನ್ನೂ ಲೋಕ ಅದಾಲತ್‌ನಲ್ಲಿ ಕೆಲವು ವಿಶಿಷ್ಟ ಪ್ರಕರಣಗಳೂ ಇತ್ಯರ್ಥಗೊಂಡಿವೆ. ರಾಮನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ 92 ವರ್ಷ ಹಳೆಯ ಓಎಸ್ 14/2019 ಪ್ರಕರಣವೊಂದು ಇತ್ಯರ್ಥಗೊಂಡಿತು. ಅಷ್ಟೇ ಅಲ್ಲದೆ, ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸದಾನಂದ ವಿಶ್ವನಾಥ್ ಅವರ ಓಎಸ್ ಪ್ರಕರಣವನ್ನೂ ಸಹ ಲೋಕ ಅದಾಲತ್‌ನಲ್ಲಿ ಪರಿಹರಿಸಲಾಗಿದೆ. ಒಟ್ಟು 367 ದಂಪತಿಗಳ ಕುಟುಂಬ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿ, ಸಂಬಂಧಗಳನ್ನು ಉಳಿಸಲು ಸಹಕರಿಸಲಾಗಿದೆ.
ಇನ್ನೂ ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೆಎಸ್‌ಎಲ್‌ಎಸ್‌ಎ ಜನವರಿ 1 ರಿಂದ ಜನವರಿ 31 ರವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತವಾಗಿರುವುದು ಗಂಭೀರ ವಿಷಯವಾಗಿದೆ. ಈ ವಿಚಾರವನ್ನು ಹೈಕೋರ್ಟ್ ಸಹ ಗಂಭೀರವಾಗಿ ಪರಿಗಣಿಸಿದೆ. ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ, ಕೆಎಸ್‌ಎಲ್‌ಎಸ್‌ಎ ಡಿಸೆಂಬರ್ 4, 2023 ರಿಂದ ಮಾರ್ಚ್ 8, 2026 ರವರೆಗೆ ಬಾಲ್ಯ ವಿವಾಹ ಮುಕ್ತ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಮೂಲಕ ಬಾಲ್ಯ ವಿವಾಹದ ವಿರುದ್ಧ ವ್ಯಾಪಕ ಜಾಗೃತಿ ಮೂಡಿಸಿ, ಈ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರಯತ್ನಿಸಲಾಗುವುದು ಎಂದು ನ್ಯಾಯಮೂರ್ತಿ ಅನು ಶಿವರಾಮನ್ ಮಾಹಿತಿ ನೀಡಿದರು.
PublicNext
17/12/2025 04:32 pm