ಬೆಂಗಳೂರು: ರಾಮಮೂರ್ತಿ ನಗರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್‌ಗೆ ಪ್ರೇಮ ಫಜೀತಿ ಶುರುವಾಗಿದೆ. ಮಹಿಳೆಯೊಬ್ಬರಿಂದ ನಿರಂತರ ಕಿರುಕುಳ ಎದುರಾಗಿದೆ. 'ನನ್ನನ್ನು ಪ್ರೀತಿಸು, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ಬೆದರಿಕೆ ಹಾಕಿದ ಮಹಿಳೆಯ ವಿರುದ್ಧ ಇನ್ಸ್‌ಪೆಕ್ಟರ್ ಸತೀಶ್ ಎಫ್‌ಐಆರ್ ದಾಖಲಿಸಿದ್ದಾರೆ.
ರಾಮಮೂರ್ತಿ ನಗರ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರಿಗೆ ಮಹಿಳೆಯು ಪಾಗಲ್ ಪ್ರೇಮಿಯಾಗಿ ಕಾಡುತ್ತಿದ್ದು, ಆಕೆ ತನ್ನನ್ನು ಕಾಂಗ್ರೆಸ್ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದಾಳೆ. 'ನನಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಗೊತ್ತು' ಎಂದು ಹೇಳುವುದರ ಜೊತೆಗೆ, ಮೋಟಮ್ಮ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗಿನ ಫೋಟೋಗಳನ್ನು ಕಳುಹಿಸಿ ಪ್ರೀತಿಸುವಂತೆ ಬೆದರಿಕೆ ಹಾಕಿದ್ದಾಳೆ. ಮಹಿಳೆಯ ದೂರು ತೆಗೆದುಕೊಳ್ಳುವಂತೆ ಗೃಹ ಸಚಿವರ ಕಚೇರಿಯಿಂದಲೂ ಕರೆ ಬಂದಿತ್ತು. ಆದರೆ ಅವರು ಯಾವುದೇ ದೂರು ಕೊಟ್ಟಿಲ್ಲ ಎಂದು ಇನ್ಸ್‌ಪೆಕ್ಟರ್ ಉತ್ತರಿಸಿದ್ದರು.
ಇನ್ಸ್‌ಪೆಕ್ಟರ್ ಠಾಣೆಯಲ್ಲಿ ಇಲ್ಲದಿದ್ದಾಗ, ಮಹಿಳೆ ಕಜ್ಜಾಯದ ಡಬ್ಬಿ ಮತ್ತು ಹೂಗುಚ್ಛಗಳನ್ನು ತಂದು ಇರಿಸಿದ್ದಳು. ಬರೋಬ್ಬರಿ 11 ಮೊಬೈಲ್ ಸಂಖ್ಯೆಗಳಿಂದ ಇನ್ಸ್‌ಪೆಕ್ಟರ್‌ಗೆ ಪ್ರೀತಿ ನಿವೇದನೆ ಮಾಡಿದ್ದು, ಮಹಿಳೆಯ ಕಾಟಕ್ಕೆ ಬೇಸತ್ತ ಇನ್ಸ್‌ಪೆಕ್ಟರ್ ಎಲ್ಲಾ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದರು. ಆದರೆ ಮಹಿಳೆಯ ಕಿರುಕುಳ ನಿಲ್ಲಲಿಲ್ಲ. ಲವ್ ಲೆಟರ್‌ನೊಂದಿಗೆ 'ನೆಕ್ಸಿಟೊ ಪ್ಲಸ್' (Nexito Plus) ಎಂಬ ಮಾತ್ರೆಗಳನ್ನು ಕಳುಹಿಸಿದ್ದಲ್ಲದೆ, ಹಾರ್ಟ್ ಚಿತ್ರ ಬರೆದು 'Chinni love u, u love me' ಎಂದು ರಕ್ತದಲ್ಲಿ ಪತ್ರ ಬರೆದು ಠಾಣೆಗೆ ಪೋಸ್ಟ್ ಮೂಲಕ ಕಳುಹಿಸಿದ್ದಳಂತೆ. ಆ ಪತ್ರದಲ್ಲಿ 'ನನ್ನ ಪ್ರೀತಿಯನ್ನು ನೀವು ಒಪ್ಪುತ್ತಿಲ್ಲ, ನಿಮಗೆ ತೊಂದರೆ ಕೊಡಲು ಇಷ್ಟ ಇಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ನೀವೇ ಕಾರಣ' ಎಂದು ಬರೆದಿದ್ದಳಂತೆ.
ಮಹಿಳೆಯ ಈ ಅತಿರೇಕದ ಕಾಟಕ್ಕೆ ಬೇಸತ್ತ ಇನ್ಸ್‌ಪೆಕ್ಟರ್ ಸತೀಶ್ ಕೊನೆಗೆ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಆತ್ಮಹತ್ಯೆ ಬೆದರಿಕೆ ಹಾಕಿದ ಆರೋಪದಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
18/12/2025 01:13 pm