ದುಬೈ: ಸಂಘಟಿತ ಭಿಕ್ಷಾಟನೆ ಮತ್ತು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಬಿಗಿ ಕ್ರಮಗಳನ್ನು ಕೈಗೊಂಡಿವೆ. ವಿಶೇಷವಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಪಾಕಿಸ್ತಾನಿ ಪ್ರಜೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಈ ವರ್ಷ ಭಿಕ್ಷಾಟನೆ ಆರೋಪದ ಮೇಲೆ ಸೌದಿ ಅರೇಬಿಯಾ 24,000 ಪಾಕಿಸ್ತಾನಿಗಳನ್ನು ಗಡಿಪಾರು ಮಾಡಿದೆ. ಇದಲ್ಲದೆ, ಯುಎಇ ಕೂಡ ಹೆಚ್ಚಿನ ಪಾಕಿಸ್ತಾನಿ ನಾಗರಿಕರ ಮೇಲೆ ವೀಸಾ ನಿರ್ಬಂಧಗಳನ್ನು ವಿಧಿಸಿದೆ. ಪಾಕಿಸ್ತಾನಿ ನಾಗರಿಕರು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಈ ಕ್ರಮಗಳಿಗೆ ಪ್ರಮುಖ ಕಾರಣವಾಗಿವೆ.
ವರದಿಗಳ ಪ್ರಕಾರ, ಭಿಕ್ಷಾಟನೆ ಆರೋಪದ ಮೇಲೆ ಈ ವರ್ಷ ಸೌದಿ ಅರೇಬಿಯಾ 24,000 ಪಾಕಿಸ್ತಾನಿಗಳನ್ನು ಗಡಿಪಾರು ಮಾಡಿದ್ದರೆ, ದುಬೈ ಸುಮಾರು 6,000 ಮತ್ತು ಅಜೆರ್ಬೈಜಾನ್ ಸುಮಾರು 2,500 ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾರು ಮಾಡಿವೆ. ಪಾಕಿಸ್ತಾನದ ಫೆಡರಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಬಿಡುಗಡೆ ಮಾಡಿದ ಮಾಹಿತಿಯು ಸಮಸ್ಯೆಯ ಪ್ರಮಾಣ ಎಷ್ಟು ತೀವ್ರವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಸಂಘಟಿತ ಭಿಕ್ಷಾಟನೆ ಸಿಂಡಿಕೇಟ್‌ಗಳನ್ನು ನಾಶಪಡಿಸಲು ಮತ್ತು ಅಕ್ರಮ ವಲಸೆಯನ್ನು ತಡೆಯುವ ಪ್ರಯತ್ನದಲ್ಲಿ, ಎಫ್‌ಐಎ ಅಧಿಕಾರಿಗಳು ಇತ್ತೀಚೆಗೆ ವಿಮಾನ ನಿಲ್ದಾಣಗಳಲ್ಲಿ 66,154 ಪ್ರಯಾಣಿಕರನ್ನು ವಿಮಾನದಿಂದ ಇಳಿಸಿದ್ದರು.
ಈ ಕುರಿತು ಮಾತನಾಡಿರುವ ಎಫ್‌ಐಎ ಮಹಾನಿರ್ದೇಶಕ ರಿಫತ್ ಮುಖ್ತಾರ್, "ಈ ಭಿಕ್ಷಾಟನೆ ಜಾಲಗಳು ಪಾಕಿಸ್ತಾನದ ಅಂತಾರಾಷ್ಟ್ರೀಯ ಪ್ರತಿಷ್ಠೆಗೆ ಧಕ್ಕೆ ತರುತ್ತಿವೆ. ಭಿಕ್ಷಾಟನೆಯು ಕೇವಲ ಕೊಲ್ಲಿ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಆಫ್ರಿಕಾ, ಯುರೋಪ್, ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನಂತಹ ದೇಶಗಳಿಗೂ ಪ್ರವಾಸಿ ವೀಸಾಗಳನ್ನು ದುರುಪಯೋಗಪಡಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಪಾಕ್ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಎಫ್‌ಐಎ ಮೂಲಕ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗಳನ್ನು ನಡೆಸುತ್ತಿದೆ. ಆದಾಗ್ಯೂ, ಈ ಜಾಲಗಳು ಇನ್ನೂ ಸಕ್ರಿಯವಾಗಿರುವುದು ಪಾಕಿಸ್ತಾನದ ಅಂತಾರಾಷ್ಟ್ರೀಯ ವರ್ಚಸ್ಸಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಪಾಕಿಸ್ತಾನಿ ಸರ್ಕಾರಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
PublicNext
19/12/2025 03:00 pm