ಬಾಂಗ್ಲಾದೇಶದ ಮೈಮೆನ್ಸಿಂಗ್ ಪ್ರದೇಶದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯೊಬ್ಬರನ್ನು ಥಳಿಸಿ, ಕಟ್ಟಿಹಾಕಿ, ಬೆಂಕಿ ಹಚ್ಚಿದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ. ವಿದ್ಯಾರ್ಥಿ ರಾಜಕೀಯ ನಾಯಕನ ಸಾವಿನ ನಂತರ ದೇಶಾದ್ಯಂತ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗಳ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು, ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಏಳು ಶಂಕಿತರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತರನ್ನು ಎಂಡಿ ಲಿಮನ್ ಸರ್ಕಾರ್, ಎಂಡಿ ತಾರೆಕ್ ಹೊಸೈನ್, ಎಂಡಿ ಮಾಣಿಕ್ ಮಿಯಾ, ಇರ್ಷಾದ್ ಅಲಿ, ನಿಜುಮ್ ಉದ್ದೀನ್, ಅಲೋಮ್‌ಗಿರ್ ಹೊಸೈನ್ ಮತ್ತು ಎಂಡಿ ಮಿರಾಜ್ ಹೊಸೈನ್ ಅಕಾನ್ ಎಂದು ಗುರುತಿಸಲಾಗಿದೆ.
ಮೈಮೆನ್‌ಸಿಂಗ್‌ನ ಭಾಲುಕಾದಲ್ಲಿ ಯುವ ಗಾರ್ಮೆಂಟ್ ಕಾರ್ಖಾನೆ ಕಾರ್ಮಿಕ ದೀಪು ಚಂದ್ರ ದಾಸ್‌ನನ್ನು ಧರ್ಮನಿಂದನೆಯ ಆರೋಪದ ಮೇಲೆ ಉದ್ರಿಕ್ತ ಗುಂಪೊಂದು ಬರ್ಬರವಾಗಿ ಹತ್ಯೆಗೈದಿತ್ತು. ಸಾವಿರಾರು ಜನರ ಕಣ್ಮುಂದೆಯೇ ಯುವ ಕಾರ್ಮಿಕ ದೀಪು ಚಂದ್ರ ದಾಸ್‌ನನ್ನು ಕಟ್ಟಿಹಾಕಿ, ಥಳಿಸಿ, ಕೊಂದು, ನಂತರ ಆತನ ದೇಹವನ್ನು ಸುಟ್ಟುಹಾಕಲಾಗಿತ್ತು.
ಈ ಘಟನೆಯು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಮತ್ತು ನೆರೆಯ ಭಾರತದ ರಾಜಕೀಯ ವಲಯಗಳಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ. ಕಳೆದ ವರ್ಷದ ವಿದ್ಯಾರ್ಥಿ ದಂಗೆಯಲ್ಲಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳು ಎದುರಿಸುತ್ತಿರುವ ಅಪಾಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸುತ್ತದೆ.
PublicNext
20/12/2025 04:44 pm