ಇಸ್ಲಾಮಾಬಾದ್: ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಲಯವು ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ 10 ವರ್ಷಗಳ ಕಠಿಣ ಜೈಲು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ತೋಷಖಾನಾದಿಂದ ಪಡೆದ ದುಬಾರಿ ಉಡುಗೊರೆಗಳನ್ನು ವೈಯಕ್ತಿಕವಾಗಿ ಉಳಿಸಿಕೊಂಡು, ಕೆಲವು ವಸ್ತುಗಳನ್ನು ಲಾಭಕ್ಕಾಗಿ ಮಾರಾಟ ಮಾಡಿದ ಆರೋಪ ಇಮ್ರಾನ್ ಖಾನ್ ಹಾಗೂ ಬುಶ್ರಾ ಬೀಬಿ ಮೇಲಿತ್ತು. ಉಡುಗೊರೆಗಳ ವಿವರಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ತೋಷಖಾನಾ ಎಂಬುದು ಕ್ಯಾಬಿನೆಟ್ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಲಾಖೆ ಆಗಿದ್ದು, ವಿದೇಶಿ ಗಣ್ಯರು ನೀಡುವ ಅಮೂಲ್ಯ ಉಡುಗೊರೆಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ.
ಈ ಮೊದಲು ಕೂಡ ತೋಷಖಾನಾ ಹಾಗೂ ಸೈಫರ್ ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಅವರಿಗೆ ವಿವಿಧ ನ್ಯಾಯಾಲಯಗಳು ಜೈಲು ಶಿಕ್ಷೆ ವಿಧಿಸಿವೆ. 2022ರ ಏಪ್ರಿಲ್‌ನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಖಾನ್ ಸರ್ಕಾರ ಪತನಗೊಂಡಿತ್ತು.
PublicNext
20/12/2025 01:09 pm
LOADING...