ಜೋಧಪುರ: ರಾಜಸ್ಥಾನದ ಪ್ರಸಿದ್ಧ ಸಿಹಿ ತಿನಿಸು 'ಫಿನಿ' (Phini) ಪ್ರಿಯರಿಗೆ ಈ ಸುದ್ದಿ ನಿಜಕ್ಕೂ ಶಾಕ್ ನೀಡಲಿದೆ. ಜೋಧಪುರದ ಸ್ವೀಟ್ ತಯಾರಿಕಾ ಘಟಕವೊಂದರಲ್ಲಿ ಕಾರ್ಮಿಕರು ಬರಿಗಾಲಿನಿಂದ ಹಿಟ್ಟನ್ನು ತುಳಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜೋಧಪುರದ 'ಬಾಲಾಜಿ ಮಿಷ್ಠಾನ್ ಭಂಡಾರ್' ಎಂಬ ಹೆಸರಿನ ಮಳಿಗೆಗೆ ಸೇರಿದ ತಯಾರಿಕಾ ಘಟಕದಲ್ಲಿ ಈ ಅಸಹ್ಯಕರ ಕೃತ್ಯ ಬೆಳಕಿಗೆ ಬಂದಿದೆ. ಫಿನಿ ತಯಾರಿಸಲು ಬೇಕಾದ ಮೈದಾ ಹಿಟ್ಟನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ, ಕಾರ್ಮಿಕರು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ತಮ್ಮ ಕೊಳಕು ಪಾದಗಳಿಂದ ತುಳಿಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹದವಾದ ಪದರಗಳು ಬರಬೇಕೆಂಬ ಕಾರಣಕ್ಕೆ ಈ ರೀತಿ ಕಾಲಿನಿಂದ ಹಿಟ್ಟು ತುಳಿಯಲಾಗುತ್ತಿತ್ತು ಎನ್ನಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ತಕ್ಷಣವೇ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ಅಶುಚಿಯಾಗಿ ತಯಾರಿಸಲಾಗಿದ್ದ ಸುಮಾರು 110 ಕೆಜಿಗೂ ಹೆಚ್ಚು ಫಿನಿ ಸಿಹಿಯನ್ನು ವಶಪಡಿಸಿಕೊಂಡು ಸ್ಥಳದಲ್ಲೇ ನಾಶಪಡಿಸಲಾಗಿದೆ. ಮಳಿಗೆಯ ಪರವಾನಗಿ ರದ್ದುಗೊಳಿಸುವ ಬಗ್ಗೆ ಮತ್ತು ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
"ನಾವು ತಿನ್ನುವ ಆಹಾರ ಇಷ್ಟು ಅಶುಚಿಯಾಗಿರುತ್ತದೆಯೇ?" ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು "ಇದು ಫಿನಿ ಅಲ್ಲ, 'ಪಾದ ಫಿನಿ' ಎಂದು ವ್ಯಂಗ್ಯವಾಡಿದ್ದಾರೆ. ಸಣ್ಣ ಪ್ರಮಾಣದ ಆಹಾರ ಸಂಸ್ಕರಣಾ ಘಟಕಗಳಲ್ಲಿ ಶುಚಿತ್ವಕ್ಕೆ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
PublicNext
23/01/2026 02:56 pm