ವಿಜಯಪುರ: ಕಂಟ್ರಿ ಪಿಸ್ತೂಲ್ ತೋರಿಸಿ ಚಿನ್ನದ ಅಂಗಡಿಯಲ್ಲಿ 205 ಗ್ರಾಂ ಬಂಗಾರದ ಆಭರಣ ಸಹಿತ 1 ಕೆಜಿ ಚಿನ್ನ ದರೋಡೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.
ಹೆಲ್ಮೆಟ್ , ಜಾಕೇಟ್ ಹಾಗೂ ಕೈಗೆ ಗ್ಲೌಸ್ ಹಾಕಿಕೊಂಡು ಬುಲೆಟ್ ಬೈಕ್ ನಲ್ಲಿ ಬಂದ ಇಬ್ವರು ದರೋಡೆಕೋರರು ಚಿನ್ನದ ಅಂಗಡಿಗೆ ನುಗ್ಗಿದ್ದಾರೆ. ಈ ವೇಳೆ ಚಿನ್ನದ ಅಂಗಡಿ ಬಳಿ ಬಂದ ವೃದ್ಧೆಗೆ ಪಿಸ್ತೂಲ್ ತೋರಿಸಿ ಹೆದರಿಸಿ ಕಳುಹಿಸಿದ್ದಾರೆ.
ನಂತರ ಚಿನ್ನದ ಅಂಗಡಿಯಲ್ಲಿದ್ದವರಿಗೆ ಪಿಸ್ತೂಲ್ ತೋರಿಸಿ ಅಂಗಡಿಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ್ದಾರೆ. ಈ ವೇಳೆ ದೂರದಲ್ಲೊಬ್ಬ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ದರೋಡೆಕೋರರು ಆತನ ಕಡೆಗೆ ಫೈರಿಂಗ್ ಮಾಡಿದ್ದಾರೆ. ಈ ವೇಳೆ 18 ವರ್ಷದ ಯುವಕನ ಕಾಲಿಗೆ ಗುಂಡು ತಗುಲಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರುದ್ರ ಕಂಚಗಾರ ಎಂಬುವವರಿಗೆ ಸೇರಿದ ಭೂಮಿಕಾ ಜ್ಯುವೆಲ್ಲರ್ಸ್‌ನಲ್ಲಿ ದರೋಡೆ ನಡೆದಿದ್ದು, ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ, ಇನ್ಸ್ ಪೆಕ್ಟರ್ ಪರಶುರಾಮ ಮನಗೂಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
27/01/2026 09:11 am
LOADING...