ವಿಜಯಪುರ: ಲ್ಯಾಂಡ್ ಪ್ರಾಪರ್ಟಿ ಮಾಲೀಕರೇ, ಎಚ್ಚರ ಎಚ್ಚರ...! ನೀವು ಸ್ವಲ್ಪ ಯಾಮಾರಿದ್ರೂ ಸಾಕು, ನಿಮ್ಮ ಮಾಲೀಕತ್ವದ ಭೂಮಿ ಮತ್ತು ನಿವೇಶನ ಮತ್ಯಾರದ್ದೋ ಪಾಲಾಗುತ್ತೆ. ಲಕ್ಷಾಂತರ ಬೆಲೆಬಾಳುವ ಸೈಟು, ಕೋಟ್ಯಂತರ ಬೆಲೆ ಬಾಳುವ ಜಮೀನು ಪಹಣಿಯಲ್ಲಿ ಇನ್ಯಾರದ್ದೋ ಹೆಸರು ಸೇರ್ಪಡೆ ಆಗುತ್ತೆ.
ಹೌದು! ವಿಜಯಪುರ ಜಿಲ್ಲೆಯ ಆದರ್ಶ ನಗರ ಪೊಲೀಸ್ ಠಾಣೆ, ಜಲನಗರ ಪೊಲೀಸ್ ಠಾಣೆ ಸೇರಿದಂತೆ ಇಂಡಿ, ಕೋಲ್ಹಾರ ಹಾಗೂ ಬಸವನಬಾಗೇವಾಡಿ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಒಟ್ಟು ಇಪ್ಪತ್ತೇಳು ಭೂ ಕಬಳಿಕೆ ಪ್ರಕರಣಗಳ ಪೈಕಿ ವಿಜಯಪುರ ಪೊಲೀಸರು ಇಪ್ಪತ್ತೈದು ಪ್ರಕರಣಗಳನ್ನ ಬೇಧಿಸಿ ಆರೋಪಿಗಳನ್ನ ಕಂಬಿಗಳ ಹಿಂದೆ ತಳ್ಳಿದ್ದಾರೆ.
ನಿರ್ಗತಿಕರು, ಬಡವರು ಮತ್ತು ಏಕಾಂಗಿಯಾಗಿ ವಾಸಿಸುವವರಿಗೆ ಧನಸಹಾಯ ಮಾಡುವುದಾಗಿ ನಂಬಿಸಿ ಅವರ ಆಧಾರ್ ಕಾರ್ಡ್ ಪಡೆದು ಅದರಲ್ಲಿ ಭೂಮಿಯ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡಿ ವಂಚಿಸುತ್ತಿದ್ದರು.
ಇನ್ಯಾರದ್ದೊ ಜಮೀನನ್ನು ಮತ್ಯಾರದೋ ಹೆಸರಿಗೆ ಏರಿಸಿ ಅವರನ್ನೇ ಮೂಲ ಮಾಲೀಕರು ಎಂದು ಬಿಂಬಿಸಿ ಮಾರಾಟ ಮಾಡುತ್ತಿದ್ದ ಜಾಲದಲ್ಲಿ ಕೆಲವರು ಹಣದ ಆಸೆಗೆ ಬಿದ್ದು ನಕಲಿ ಮಾಲೀಕರಾಗಿದ್ದಾರೆ. ಇನ್ನೂ ಕೆಲವರು ಈ ವಂಚಕರ ಗ್ಯಾಂಗ್ ನ ಸದಸ್ಯರೇ ಆಗಿದ್ದಾರೆ. ಅಲ್ಲೊಂದು ಸೈಟ್ ಇದೆ ತಗೋಳ್ತೀರಾ ಅನ್ನುತ್ತ ಬಕ್ರಾಗಳನ್ನ ಖೆಡ್ಡಕ್ಕೆ ಕೆಡವುತ್ತಿದ್ದ ಗ್ಯಾಂಗ್ ಕಡಿಮೆ ದರದಲ್ಲಿ ಮತ್ಯಾರದ್ದೋ ಜಮೀನು ಅಥವಾ ಸೈಟನ್ನು ಮಾರಾಟ ಮಾಡಿ ವಂಚಿಸುತ್ತಿದ್ದರು. ಮೂಲ ಮಾಲೀಕರ ಗಮನಕ್ಕೆ ತರದೆ ವ್ಯವಹಾರ ಕುದುರಿಸುತ್ತಿದ್ದರು. ಈ ಮಾಹಿತಿ ಕಲೆ ಹಾಕಿದ ವಿಜಯಪುರ ಪೊಲೀಸರು ಸದ್ಯ ವಂಚಕರ ಜಾಲವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದು ಜಮೀನು ಮತ್ತು ನಿವೇಶನಗಳ ಮೂಲ ಮಾಲೀಕರಿಗೆ ಅವುಗಳನ್ನು ಮರಳಿ ಕೊಡುವ ಪ್ರಕ್ರಿಯೆ ಶುರು ಮಾಡಿ ನ್ಯಾಯಾಲಯದಲ್ಲಿ 200 ಜನ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.
ಒಟ್ಟಾರೆ ಆಗಿ ಕಳೆದ ಕೆಲದಿನಗಳ ಹಿಂದಷ್ಟೇ ವಿವಿಧ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ವಂಚನೆಗೆ ಒಳಗಾಗಿದ್ದ ಜನರಿಗೆ ಅವರ ಹಣ ಮತ್ತು ಚಿನ್ನಾಭರಣ ಮರಳಿಸುವಲ್ಲಿ ಯಶಸ್ವಿ ಆಗಿದ್ದ ಪೊಲೀಸರು ಸದ್ಯ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು ಭೂ ಕಬಳಿಕೆ ಮತ್ತು ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿದ್ದು ಇದರಲ್ಲಿ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಶಾಮೀಲಾಗಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಹಿತ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಜೈಲಿಗಟ್ಟಬೇಕಿದೆ.
PublicNext
01/02/2026 08:31 am