ಮಡಿಕೇರಿ : ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಮಾಂದಲಪಟ್ಟಿಯಲ್ಲಿ ಪ್ರವಾಸಿಗರಿಂದ ಜೀಪ್ ಚಾಲಕನೋರ್ವ ದುಬಾರಿ ಬಾಡಿಗೆ ಪಡೆದ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಚಾಲಕನನ್ನು ಬಂಧಿಸಲಾಗಿದೆ.
ಪ್ರವಾಸಿಗನೋರ್ವ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಬಾಡಿಗೆ ಜೀಪುಗಳ ತಪಾಸಣೆ ನಡೆಸಲಾಗ್ತಿದೆ. ಕೆಲ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಜನವರಿ 26ರಂದು ಬೆಂಗಳೂರಿನ ಅಂಕಿತ್ ಎಂಬವರು ಕುಟುಂಬದ ಜೊತೆ ಕೊಡಗಿಗೆ ಪ್ರವಾಸ ಬಂದಿದ್ರು. ಜ.24ರಂದು ಕುಶಾಲನಗರ ಭಾಗದಲ್ಲಿ ಸುತ್ತಾಡಿ, ಜ.25ರ ಭಾನುವಾರ ಜೀಪ್ ಸವಾರಿ ಮೂಲಕ ತೆರಳಿ ಮಾಂದಲಪಟ್ಟಿ ಸೂರ್ಯೋದಯ ವೀಕ್ಷಿಸಲು ಪ್ಲಾನ್ ಮಾಡಿಕೊಂಡಿದ್ರು. ಅದರಂತೆ ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಜೀಪ್ ಸ್ಟ್ಯಾಂಡ್‌ಗೆ ಬಂದ ಪ್ರವಾಸಿ ಕುಟುಂಬ ಬಾಡಿಗೆ ಜೀಪ್ ಏರಲು ಮುಂದಾದ್ರು.
ಈ ವೇಳೆ ಜೀಪ್ ಚಾಲಕ ಸವಿನ್ ಎಂಬಾತ 4 ಸಾವಿರ ಬಾಡಿಗೆ ಕೇಳಿದಾಗ, ಅದು ದುಬಾರಿ ಮೊತ್ತವಾಯಿತೆಂದು ಪ್ರವಾಸಿಗ ಅಂಕಿತ್ ಅಷ್ಟೊಂದು ಹಣ ಕೊಡಲು ನಿರಾಕರಿಸಿದ್ರು. 2,500 ರೂ ದರ ನಿಗದಿಯಾಗಿದ್ರೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಆದರೆ 4 ಸಾವಿರ ಕೊಡಲೇ ಬೇಕೆಂದು ಚಾಲಕ ಪಟ್ಟು ಹಿಡಿದಿದ್ದ. ಬೆಳಗಿನ ಸನ್ ರೈಸ್ ನೋಡಬೇಕೆಂಬ ಆಸೆಯಿಂದ ಕೇಳಿದಷ್ಟು ಹಣ ಕೊಡಲು ಒಪ್ಪಿಕೊಂಡು ಪ್ರವಾಸಿ ಕುಟುಂಬ ಜೀಪ್ ಏರಿತು. ಮಾಂದಲಪಟ್ಟಿ ಗೇಟ್ ಬಳಿ ಅರಣ್ಯ ಇಲಾಖೆಗೆ ಪಾವತಿಸಬೇಕೆಂದು 500 ರೂಪಾಯಿ ಪಡೆದುಕೊಂಡಿದ್ದಾರೆಂದು ಪ್ರವಾಸಿಗ ಅಂಕಿತ್ ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೀಡಿಯೋ ಮುಖಾಂತರ ಅವರು ಒತ್ತಾಯಿಸಿದ್ದರು.ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಚಾಲಕ ಸವಿನ್, ಹೆಚ್ಚುವರಿ ಪಡೆದಿದ್ದ ಹಣವನ್ನು ತಕ್ಷಣ ಪ್ರವಾಸಿಗನ ಖಾತೆಗೆ ಹಿಂತಿರುಗಿಸಿದ್ದಾರೆ. ಆದರೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ ಚಾಲಕನ ಬಂಧನವಾಗಿದೆ. ಆತನನ್ನು ತನಿಖೆಗೊಳಪಡಿಸಲಾಗಿದೆ.
ನಗರದಲ್ಲಿ ಮಾಂದಲಪಟ್ಟಿ ಬಾಡಿಗೆ ಜೀಪುಗಳ ತಪಾಸಣೆ ಕಾರ್ಯ ನಡೆಯಿತು. ಸಂಚಾರಿ ಠಾಣೆಯ ಪಿಎಸ್‌ಐ ಶ್ರೀಧರ್ ನೇತೃತ್ವದಲ್ಲಿ ವಾಹನಗಳ ದಾಖಲಾತಿ ಪರಿಶೀಲನೆ ಮಾಡಲಾಯಿತು. ಗ್ರಾಮಾಂತರ ಠಾಣೆಯ ಪೊಲೀಸರು 3 ಜೀಪುಗಳನ್ನು ವಶಕ್ಕೆ ಪಡೆದಿದ್ದಾರೆ.
PublicNext
28/01/2026 06:39 pm