ಚಳ್ಳಕೆರೆ: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಗೂಡ್ಸ್‌ವಾಹನ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ, ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರಲ್ಲಿ ಒಬ್ಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ.
ರೇಖಲಗೆರೆ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಅಜ್ಜಯ್ಯ, ಸೃಜನ್, ಶ್ರೀಕಾಂತ್ ಮತ್ತು ಪ್ರಸಾದ್ ಗಾಯಗೊಂಡವರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೇಖಲಗೆರೆ ಲಂಬಾಣಿಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅಬ್ಬೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಪರೀಕ್ಷಾ ಕೇಂದ್ರವಾಗಿತ್ತು. ಮಂಗಳವಾರ ನಡೆದ ಗಣಿತ ವಿಷಯದ ಪೂರ್ವಸಿದ್ಧತಾ ಪರೀಕ್ಷೆ ಮುಗಿದ ನಂತರ, ವಿದ್ಯಾರ್ಥಿಗಳು ಗೂಡ್ಸ್ ವಾಹನದಲ್ಲಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು.
ಮಲ್ಲೂರಹಳ್ಳಿ ಸಮೀಪದ ಕಾವಲು ಪ್ರದೇಶದಲ್ಲಿ ವಾಹನದ ಮುಂದಿನ ಟೈರ್ ಸ್ಫೋಟಗೊಂಡಿದ್ದರಿಂದ, ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆಯಿಂದ ಪಕ್ಕಕ್ಕೆ ಜಾರಿ ಪಲ್ಟಿಯಾಗಿದೆ.
ದುರಂತದ ಪರಿಣಾಮವಾಗಿ, ಒಬ್ಬ ವಿದ್ಯಾರ್ಥಿಯ ಕಾಲು ಮತ್ತು ಕೈ ಮೂಳೆಗಳು ಮುರಿದು ಗಂಭೀರ ಗಾಯಗಳಾಗಿವೆ. ಕೂಡಲೇ ಗಾಯಗೊಂಡ ವಿದ್ಯಾರ್ಥಿಗಳನ್ನು ನಾಯಕನಹಟ್ಟಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
28/01/2026 07:32 pm
LOADING...