ಚಳ್ಳಕೆರೆ: ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಅಡ್ಡೆಯ ಮೇಲೆ ಚಳ್ಳಕೆರೆ ಪೊಲೀಸರು ದಾಳಿ ನಡೆಸಿ, 8 ಜನರನ್ನು ವಶಕ್ಕೆ ಪಡೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಫೆಬ್ರವರಿ 01 ರಂದು ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ, ಕಲಮರಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಕೆಲವರು ಗುಂಪಾಗಿ ಸೇರಿ ಹಣವನ್ನು ಪಣವಾಗಿಟ್ಟು 'ಅಂದರ್-ಬಾಹರ್' ಇಸ್ಪೀಟ್ ಆಟವಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಠಾಣೆಯ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಜೂಜಾಟದಲ್ಲಿ ನಿರತರಾಗಿದ್ದ ನಾಗರಾಜ ಮತ್ತು ಇತರೆ 7 ಜನ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಸ್ಥಳದಿಂದ ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟ್ ಎಲೆಗಳು, ಒಂದು ಹಳೆಯ ಟವಲ್ ಹಾಗೂ ಪಣಕ್ಕಿಟ್ಟಿದ್ದ ಒಟ್ಟು 6,100 ರೂ. ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಸಿ ಶಂಕರಣ್ಣ ಕೆ. ಅವರು ನೀಡಿದ ದೂರಿನನ್ವಯ, ಠಾಣೆಯ ಪಿಎಸ್‌ಐ ಈರೇಶ್ ಅವರ ನೇತೃತ್ವದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
03/02/2026 10:49 am
LOADING...