ಚಳ್ಳಕೆರೆ: ಮೂಕ ಪ್ರಾಣಿಯ ನೋವನ್ನು ನೋಡಿಯೂ ನಿರ್ಲಕ್ಷ್ಯಿಸುವ ಸಮಾಜದ ಮಧ್ಯೆ, ಮಾನವೀಯತೆಯನ್ನು ಮೆರೆದ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.
ನಗರದ ವೀರಶೈವ ಖಾನಾವಳಿ ಹಾಗೂ ಬನಶ್ರೀ ಖಾನಾವಳಿ ಸಮೀಪ ವಿದ್ಯುತ್ ಸ್ಪರ್ಶದಿಂದ ಮೂರು ದಿನಗಳಿಂದ ನರಳುತ್ತಿದ್ದ ಕೋತಿ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಯಶಸ್ವಿಯಾಗಿ ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ.
FLOW
ನಗರದ ಪ್ರಸಿದ್ಧ ವೀರಶೈವ ಹಾಗೂ ಬನಶ್ರೀ ಖಾನಾವಳಿಗಳ ಮೇಲ್ಛಾವಣಿಯ ಮೇಲೆ ಕೋತಿ ಮರಿ ಮೂರು ದಿನಗಳಿಂದ ಒಂದೇ ಸ್ಥಳದಲ್ಲಿ ಕುಳಿತಿದ್ದುದನ್ನು ಗಮನಿಸಿದ ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿ, ಕೇವಲ ನೋಡಿಕೊಂಡು ಹೋಗದೇ ಮಾನವೀಯತೆಯಿಂದ ಸ್ಪಂದಿಸಿದರು. ವಿದ್ಯುತ್ ತಗುಲಿರುವುದನ್ನು ಅರಿತು ಹಣ್ಣು–ಹಂಪಲು ನೀಡಿ ಪೋಷಣೆ ಮಾಡುತ್ತ, ಪ್ರಾಣ ಉಳಿಸುವ ಪ್ರಯತ್ನ ನಡೆಸಿದರು.
ಈ ವಿಷಯ ಅರಣ್ಯ ಇಲಾಖೆಯ ಗಮನಕ್ಕೆ ಬಂದ ಕೂಡಲೇ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ದರ್ಶನ್ ಅವರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕೋತಿ ಮರಿಯನ್ನು ರಕ್ಷಿಸಿ ಪಶು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು.
ಸದ್ಯ ಕೋತಿ ಮರಿ ಚೇತರಿಸಿಕೊಳ್ಳುತ್ತಿದೆ ಎನ್ನುವುದು ನೆಮ್ಮದಿಯ ಸುದ್ದಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ದರ್ಶನ್ ತಿಳಿಸಿದ್ದಾರೆ.
ಮೂಕ ಜೀವಕ್ಕೂ ಜೀವವಿದೆ, ನೋವಿದೆ ಎಂಬುದನ್ನು ಅರಿತು ಸಹಾಯಕ್ಕೆ ನಿಂತ ಹೋಟೆಲ್ ಸಿಬ್ಬಂದಿ ಹಾಗೂ ತಕ್ಷಣ ಸ್ಪಂದಿಸಿ ರಕ್ಷಣಾ ಕಾರ್ಯ ಕೈಗೊಂಡ ಅರಣ್ಯ ಇಲಾಖೆಯ ಸಿಬ್ಬಂದಿಯ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
PublicNext
03/02/2026 04:28 pm
LOADING...