ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು ಬೂದುಗುಂಬಳ ಬೆಲೆ ಕುಸಿತ: ರೈತರ ಬದುಕು ಕಂಗಾಲು

ಮೊಳಕಾಲ್ಮುರು: ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳ ಹಲವು ಭಾಗದಲ್ಲಿ ಬೂದುಗುಂಬಳ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಇರುವ ಕಾರಣ ಹಾಗೂ ನಿರ್ವಹಣೆ ಸುಲಭ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಕುಂಬಳ ನಾಟಿ ಮಾಡಲಾಗುತ್ತಿದೆ. ಕಡಿಮೆ ನೀರು ಬಳಸಿ ಬೆಳೆಯಬಹುದು ಎಂದೂ ಅನೇಕರು ಕುಂಬಳ ನಾಟಿ ಮಾಡುತ್ತಿದ್ದಾರೆ.

ಎರಡು ತಿಂಗಳ ಹಿಂದೆ ಕೆ.ಜಿ. ಕುಂಬಳಕ್ಕೆ ₹15ರ ಆಸುಪಾಸಿನಲ್ಲಿ ದರ ಇತ್ತು. ಪ್ರಸ್ತುತ ₹2-3 ರೂಪಾಯಿಗೆ ಕುಸಿತವಾಗಿದ್ದು, ಅದೂ ಬೇಡಿಕೆ ಇಲ್ಲದೇ ರೈತರು ಮಧ್ಯವರ್ತಿಗಳ ಬಳಿ ಅಂಗಲಾಚಿ ಮಾರಾಟ ಮಾಡಬೇಕಿದೆ. ರಾಜ್ಯದಲ್ಲಿ ಎಲ್ಲಿಯೂ ಕುಂಬಳಕ್ಕೆ ನಿರ್ದಿಷ್ಟ ಮಾರುಕಟ್ಟೆ ಇಲ್ಲದ ಪರಿಣಾಮ ಉತ್ತರ ಭಾರತದ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಬೇಕಿದೆ.

ಇಲ್ಲಿಂದ ಕುಂಬಳವನ್ನು ಮುಖ್ಯವಾಗಿ ಆಗ್ರಾ ಮಾರುಕಟ್ಟೆಗೆ ಕಳಿಸಲಾಗುತ್ತಿದೆ. ಉಳಿದಂತೆ ರಾಜಸ್ಥಾನ, ದೆಹಲಿ, ಬೆಂಗಳೂರು, ಕೇರಳ ಮಾರುಕಟ್ಟೆಗಳಿಗೆ ಸ್ವಲ್ಪ ಪ್ರಮಾಣದಲ್ಲೂ ಹೋಗುತ್ತದೆ. ಉತ್ತರ ಭಾರತದಲ್ಲಿ ಈ ಕುಂಬಳದಿಂದ ಸಿಹಿ ತಿನಿಸು ಪೇಟಾ ತಯಾರು ಮಾಡಲಾಗುತ್ತದೆ. ಉಳಿದಂತೆ ಶುಭ ಸಮಾರಂಭಗಳಲ್ಲಿ ಅಡುಗೆಗೆ ಬಳಕೆ ಮಾಡಲಾಗುತ್ತದೆ. ಧನುರ್ಮಾಸ ಇರುವ ಕಾರಣ ಶುಭ ಸಮಾರಂಭಗಳು ಕಡಿಮೆಯಾಗಿವೆ ಮತ್ತು ಉತ್ತರ ಭಾರತದಲ್ಲಿ ಸದ್ಯಕ್ಕೆ ಅಗತ್ಯದಷ್ಟು ಕುಂಬಳ ಬೆಳೆ ಲಭ್ಯವಿರುವುದರಿಂದ ಬೇಡಿಕೆ ಕಡಿಮೆಯಾಗಿದೆ’ ಎಂದು ಹೇಳಲಾಗುತ್ತಿದೆ.

ಈ ವರ್ಷ ಚಳಿ ಹೆಚ್ಚಾಗಿರುವುದರಿಂದ ರೋಗ ಬಾಧೆ ಉಂಟಾಗಿ ಕಾಯಿಯ ಬೆಳವಣಿಗೆ ಅಷ್ಟಾಗಿ ಆಗಿಲ್ಲ. ದೊಡ್ಡ ಕಾಯಿಗಳು ಮಾತ್ರ ಉತ್ತರ ಭಾರತಕ್ಕೆ ರಫ್ತಾಗುತ್ತವೆ. ಸಣ್ಣ ಕಾಯಿಗಳನ್ನು ಸ್ಥಳೀಯ ಮಾರುಕಟ್ಟೆಗೆ ಕಳಿಸಲಾಗುತ್ತದೆ. ಪ್ರತಿ ಎಕರೆಗೆ 40–50 ಟನ್‌ ಇಳುವರಿ ಬರಬೇಕಿದ್ದು, ಈ ಸಲ ಬರೀ 15– 20 ಟನ್‌ ಬಂದಿದೆ. ಇಲ್ಲಿಂದ ಆಗ್ರಾ ಭಾಗಕ್ಕೆ ರಫ್ತು ಮಾಡಲು ಪ್ರತಿ ಕೆ.ಜಿ.ಗೆ ₹ 5ರಿಂದ ₹ 6 ಖರ್ಚು ಬರುತ್ತದೆ. ಇದೇ ದರಕ್ಕೆ ಅಲ್ಲಿ ಕಾಯಿ ಸಿಗುತ್ತಿರುವುದರಿಂದ ವ್ಯಾಪಾರಿಗಳು ಬರುತ್ತಿಲ್ಲ. ಅಲ್ಲಿ ಬೆಳೆ ಖಾಲಿಯಾಗುವವರೆಗೆ ನಮಗೆ ದರ ಸಿಗುವುದು ಅನುಮಾನ ಎಂಬ ಮಾಹಿತಿ ಸಿಕ್ಕಿದೆ’ ಎಂದು ರೈತರು ಹೇಳುತ್ತಾರೆ.

ಈ ಕುಂಬಳ ಬೆಳೆಯಲು ಪ್ರತಿ ಎಕರೆಗೆ ₹ 50,000– ₹ 60,000 ಖರ್ಚು ಬರುತ್ತದೆ. ಕಾಯಿ ಕೊಳ್ಳುವವರೇ ಇಲ್ಲದ ಪರಿಣಾಮ ಕೇಳಿದ ದರಕ್ಕೆ ಕೊಡಬೇಕಿದೆ. ಕೆಲವರು ಬೆಳೆ ನಾಶಪಡಿಸಿದ್ದು, ಹಾಕಿದ ಬಂಡವಾಳ ಪೂರ್ಣ ನಷ್ಟವಾಗಿದೆ. ಮೊಳಕಾಲ್ಮುರು ತಾಲೂಕಿನ ರಾವಲಕುಂಟೆ ಗ್ರಾಮದ ಅಶೋಕ ರೆಡ್ಡಿ ತನ್ನ ಜಮೀನಲ್ಲಿ ಬೆಳೆದ ಕಾಯಿಗಳನ್ನು ಕೊಳ್ಳುವವರೇ ಇಲ್ಲದೇ ಹಾಗೇ ಕೊಳೆಯುತ್ತಿವೆ, ಹಿರೇಹಳ್ಳಿ ಗ್ರಾಮದಲ್ಲಿ ಯುವ ಕೃಷಿಕನೋರ್ವ ತನ್ನ ಹೊಲದಲ್ಲಿ ಕುಂಬಳ ಕಾಯಿಗಳನ್ನು ಕೇಳುವವರೇ ಇಲ್ಲದ ಕಾರಣ ಟ್ರ್ಯಾಕ್ಟರ್ ಮೂಲಕ ನಾಶ ಪಡಿಸಿದ್ದಾನೆ.

Edited By :
Kshetra Samachara

Kshetra Samachara

01/02/2026 03:43 pm

Cinque Terre

2.12 K

Cinque Terre

0

ಸಂಬಂಧಿತ ಸುದ್ದಿ