ಚಳ್ಳಕೆರೆ: ತಾಲ್ಲೂಕಿನ ಬೆಳಗೆರೆ ಗ್ರಾಮದ ಸಮೀಪವಿರುವ ಫೀಡರ್ ಕಾಲುವೆ ಸೇತುವೆಯ ಕಾಮಗಾರಿ ಅಪೂರ್ಣಗೊಂಡಿದ್ದು, ಅಲ್ಲಿನ ಗುಂಡಿ ವಾಹನ ಸವಾರರಿಗೆ ನಿರಂತರ ಅಪಾಯವನ್ನು ಆಹ್ವಾನಿಸುತ್ತಿದೆ.
ಈ ರಸ್ತೆಯು ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಹಳೆಯ ಸೇತುವೆ ಶಿಥಿಲಗೊಂಡಿದ್ದರಿಂದ ಅದನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಕಾಮಗಾರಿ ವಿಳಂಬವಾಗಿರುವುದರಿಂದ, ವಾಹನ ಸಂಚಾರಕ್ಕಾಗಿ ಕಿರಿದಾದ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲಾಗಿದೆ. ಎರಡು ಸಿಮೆಂಟ್ ಪೈಪ್‌ಗಳನ್ನು ಹಾಕಿ ಅದರ ಮೇಲೆ ಮಣ್ಣು ಹಾಕಿ ಈ ರಸ್ತೆಯನ್ನು ಮಾಡಲಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿರುವ ಫೀಡರ್ ಕಾಲುವೆ ಹಾಗೂ ಸೇತುವೆಗಾಗಿ ಅಗೆದ ಗುಂಡಿ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.
ಸುಮಾರು ನಾಲ್ಕು ವರ್ಷಗಳಿಂದಲೂ ಈ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಸೇತುವೆ ನಿರ್ಮಾಣಕ್ಕಾಗಿ ಅಗೆದ ಈ ಗುಂಡಿ, ವಾಹನ ಸವಾರರ ಪಾಲಿಗೆ ಸಾವಿನ ಬಲೆಯನ್ನು ಬೀಸುತ್ತಿದೆ.
ಈಗಾಗಲೇ ಇದೇ ಗುಂಡಿಯಲ್ಲಿ ಬಿದ್ದು ಇಬ್ಬರು ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಇತ್ತೀಚೆಗೆ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸೊಂದು ಗುಂಡಿಗೆ ಬೀಳುವುದನ್ನು ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿಸಲಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರ ಪ್ರಾಣಾಪಾಯ ದೂರಾಗಿದ್ದು, ದೊಡ್ಡ ಅನಾಹುತವೊಂದು ಸಂಭವಿಸುವುದು ತಪ್ಪಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ, ಫೀಡರ್ ಕಾಲುವೆಯ ಮೇಲೆ ಪೂರ್ಣ ಪ್ರಮಾಣದ ಸೇತುವೆಯನ್ನು ನಿರ್ಮಿಸಿ, ಮತ್ತಷ್ಟು ಅನಾಹುತಗಳು ಸಂಭವಿಸುವುದನ್ನು ತಡೆಯಬೇಕೆಂದು ಬೆಳಗೆರೆ ಗ್ರಾಮದ ಶಶಿಧರ್, ಕೆ. ಆರ್. ರಾಜಣ್ಣ, ಪೂಜಾರಿ ಮಹಾಲಿಂಗಪ್ಪ, ನಾಗಾರ್ಜನ್, ಜಯಣ್ಣ, ರಂಗಸ್ವಾಮಿ, ಈರಣ್ಣ, ಮಾರುತಿ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಜೆ. ರವಿ ತೀವ್ರವಾಗಿ ಒತ್ತಾಯಿಸಿದ್ದಾರೆ.
PublicNext
02/02/2026 08:02 pm