ಚಳ್ಳಕೆರೆ: ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕಿದ್ದ ಮಡಿವಾಳ ಮಾಚಿದೇವ ವಿದ್ಯಾರ್ಥಿ ನಿಲಯವು ಇಂದು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಣಗುಡುತ್ತಿರುವುದು ತೀವ್ರ ದುರಂತವಾಗಿದೆ. ಸುಮಾರು 20 ವರ್ಷಗಳ ಹಿಂದೆ ಮಡಿವಾಳ ಸಮುದಾಯದ ಶೈಕ್ಷಣಿಕ ಉನ್ನತಿಗೆ ಆಶಾಕಿರಣವಾಗಲಿ ಎಂಬ ಸದುದ್ದೇಶದಿಂದ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ನಿರ್ಮಿಸಲಾದ ಈ ನಿಲಯ, ಇಂದು ಇದ್ದರೂ ಇಲ್ಲದಂತ ಸ್ಥಿತಿಗೆ ತಲುಪಿ, ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ಬದಲು ಭಯದ ವಾತಾವರಣ ಸೃಷ್ಟಿಸಿದೆ.
ಕಟ್ಟಡದ ನಿರ್ವಹಣೆಯ ಸಂಪೂರ್ಣ ಕೊರತೆ ಮತ್ತು ಮೂಲಭೂತ ಸೌಲಭ್ಯಗಳ ಅಭಾವದಿಂದಾಗಿ ನಿಲಯದ ಸ್ಥಿತಿ ಶೋಚನೀಯವಾಗಿದೆ. ಮಳೆಗಾಲದಲ್ಲಿ ಕಟ್ಟಡದ ಮೇಲ್ಚಾವಣಿಯಿಂದ ನೀರು ಚಿಮ್ಮುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊಠಡಿಗಳು ವಾಸಕ್ಕೆ ಅಸಾಧ್ಯವಾಗಿವೆ. ಒಂದು ಕಾಲದಲ್ಲಿ ಹಲವು ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದ ಈ ನಿಲಯ ಇಂದು ಸಂಪೂರ್ಣ ಖಾಲಿ ಕಟ್ಟಡವಾಗಿ ಪರಿಣಮಿಸಿದೆ. ಬೀಗ ಹಾಕಿದ ಕೊಠಡಿಗಳು, ಧೂಳಿನಿಂದ ತುಂಬಿದ ಜಾಡು, ಪಕ್ಷಿಗಳ ಹಾಗೂ ವಿಷ ಜಂತುಗಳ ವಾಸಸ್ಥಾನವಾಗಿ ನಿರ್ಜೀವ ವಾತಾವರಣಕ್ಕೆ ಬಂದು ತಲುಪಿದೆ.
"ನಿಲಯದಲ್ಲಿ ಉಳಿಯಲು ಯಾವುದೇ ಅನುಕೂಲಕರ ವಾತಾವರಣ ಇಲ್ಲ. ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಇಲ್ಲಿ ವಾಸಿಸುವುದು ಕಷ್ಟವಾಗಿದೆ" ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳೇ ಈ ನಿಲಯದಿಂದ ದೂರ ಉಳಿಯುವಂತಾಗಿದೆ.
ಒಂದು ದಶಕಗಳ ಕನಸಾಗಿದ್ದ ಈ ವಿದ್ಯಾರ್ಥಿ ನಿಲಯದ ದುಸ್ಥಿತಿ, ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಶಿಕ್ಷಣವೇ ಬದುಕಿನ ಏಕೈಕ ಆಶ್ರಯವಾಗಿರುವ ಸಂದರ್ಭದಲ್ಲಿ, ಸಾಮಾಜಿಕ ಅನ್ಯಾಯಕ್ಕೆ ಸಮಾನವಾಗಿದೆ. ಈ ನಿಲಯಕ್ಕೆ ಮರುಜೀವ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಉಳಿಸಲು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕಿದೆ.
PublicNext
01/02/2026 02:40 pm
LOADING...