ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಬೀಳುವ ಹಂತದಲ್ಲಿ ಬೇಡರ ಶಿವನಕೆರೆ ಶಾಲೆ!; ಭಯದಲ್ಲೇ ಮಕ್ಕಳ ಕಲಿಕೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬೇಡರಶಿವನಕೆರೆ ಗ್ರಾಮ. ಹೌದು, ಇದೇ ಗ್ರಾಮದಲ್ಲಿ 1945ರ ಸ್ವಾತಂತ್ರ್ಯ ಪೂರ್ವದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣ ಮಾಡಲಾಗಿತ್ತು. ಆದರೆ, ಅದೇ ಶಾಲೆ ಇಂದು ಸಂಪೂರ್ಣ ಬೀಳುವ ಹಂತಕ್ಕೆ ಬಂದು ತಲುಪಿದೆ. ಸದ್ಯ ಇಲ್ಲಿ ಗೋಡೆಗಳು ಬಿರುಕು ಬಿಟ್ಟಿದ್ದು, ಮೇಲ್ಚಾವಣಿ ಸಂಪೂರ್ಣ ಕುಸಿದು ಹೋಗಿದೆ.

ಇದರಿಂದ ಇಲ್ಲಿ ಪಾಠ ಕೇಳೋ ಮಕ್ಕಳ ಸ್ಥಿತಿ ಮಾತ್ರ ಹೇಳತೀರದಾಗಿದೆ. ಅಲ್ಲದೆ, ಒಡೆದ ಹೆಂಚುಗಳು ಯಾವಾಗ ಮೇಲೆ ಬೀಳುತ್ತೋ ಅನ್ನೋ ಭಯದಲ್ಲೇ ಮಕ್ಕಳು ಪಾಠ ಕೇಳ್ತಿದ್ದಾರೆ. ಮತ್ತೊಂದು ಕಡೆ ಇಲ್ಲಿ ಶೌಚಾಲಯ ವ್ಯವಸ್ಥೆ ಕೂಡಾ ಇಲ್ಲವಾಗಿದ್ದು, ಮಕ್ಕಳು ಬಯಲು ಶೌಚಾಲಯಕ್ಕೆ ಹೋಗ್ತಿದ್ದಾರೆ. ಇನ್ನೂ ಶಾಲೆಯಲ್ಲಿ ಸದ್ಯ 63 ಮಂದಿ ಮಕ್ಕಳಿದ್ದು, ಶಾಲೆ ಸ್ಥಿತಿ ನೋಡಿ ಪೋಷಕರು ಬೇರೆ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡ್ತಿದ್ದಾರೆ. ಇದರಿಂದ ಪ್ರಸ್ತುತ ವರ್ಷದಲ್ಲಿ ಒಂದನೇ ತರಗತಿಯಲ್ಲಿ ಒಬ್ಬನೇ ವಿದ್ಯಾರ್ಥಿ ಅಡ್ಮಿಷನ್ ಆಗಿದ್ದಾನೆ! ಇದರಿಂದ ಕೂಡಲೇ ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡಿ ಅಂತ ಸ್ಥಳೀಯರು ಒತ್ತಾಯ ಮಾಡ್ತಿದ್ದಾರೆ.

ಇನ್ನೂ 1ರಿಂದ 7ನೇ ತರಗತಿವರೆಗೆ ಕೇವಲ 3 ಕೊಠಡಿ ಮಾತ್ರ ಇದ್ದು, ಮಕ್ಕಳಿಗೆ ಉಸಿರುಗಟ್ಟಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸ್ಥಳೀಯರ ಮನವಿ ಮೇರೆಗೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಎರಡು ಹೊಸ ಕಟ್ಟಡ ಕಟ್ಟಿಸಿದ್ದಾರೆ. ಆದರೆ, ಶಾಲೆ ಕಟ್ಟಲು ಮೀಸಲಿಟ್ಟಿದ್ದ ಜಾಗದಲ್ಲಿ ಕೆಲ ಸ್ಥಳೀಯರು ಮನೆ ಕಟ್ಟಿ ಕಟ್ಟಿಕೊಂಡು ಒತ್ತುವರಿ ಮಾಡಿದ್ದಾರೆ. ಇದರಿಂದ ಹೊಸ ಕಟ್ಟಡ ನಿರ್ಮಾಣ ಮಾಡಿದ್ರು ಕೂಡಾ ಮಕ್ಕಳಿಗೆ ಅದರ ಸೌಕರ್ಯ ಸಿಗದಂತಾಗಿದೆ. ಇದರಿಂದ ಶಾಲೆಯಲ್ಲಿ ಪಾಠ ಪ್ರವಚನಕ್ಕೂ ಅಡ್ಡಿಯಾಗ್ತಿದೆ. ಹೀಗಾಗಿ ಆಕ್ರೋಶಗೊಂಡಿರೋ ಸ್ಥಳೀಯರು ಒತ್ತುವರಿ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಒಟ್ಟಾರೇ ಹೊಸ ಕಟ್ಟಡ ನಿರ್ಮಾಣವಾಗಿದ್ರೂ ಹಳೆ ಶಾಲೆ ಕಟ್ಟಡದಲ್ಲೇ ಮಕ್ಕಳು ಪಾಠ ಕೇಳುವಂತಾಗಿದೆ. ಮಕ್ಕಳ ಶಿಕ್ಷಣಕ್ಕೆ ನೆರವಾಗಲಿ ಅಂತ ಬಿಲ್ಡಿಂಗ್ ಕಟ್ಟಿದ್ದ ಜಾಗದಲ್ಲಿ ಕೆಲವರು ಒತ್ತುವರಿ ಮಾಡಿ ಮನೆ ಕಟ್ಟಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಇನ್ನಾದ್ರೂ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಒತ್ತುವರಿ ತೆರವು ಮಾಡಿ ಮಕ್ಕಳಿಗೆ ಅನುಕೂಲ ಮಾಡಿಕೊಡ್ಬೇಕಿದೆ.

Edited By : Vinayak Patil
Kshetra Samachara

Kshetra Samachara

31/01/2026 09:10 am

Cinque Terre

9.88 K

Cinque Terre

0

ಸಂಬಂಧಿತ ಸುದ್ದಿ