ಭಟ್ಕಳ : ತಾಲೂಕಿನ ಮುಠ್ಠಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಖ್ಯಾತ ಮಕ್ಕಳ ತಜ್ಞ ಡಾ. ಚೇತನ್ ಕಲ್ಕೂರ ಅವರು ಉದ್ಘಾಟಿಸಿದರು.
ಉಪನ್ಯಾಸದಲ್ಲಿ ಮಾತನಾಡಿದ ಅವರು, ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ತಂದೆ–ತಾಯಿಯ ಪಾತ್ರ ಅತ್ಯಂತ ಮಹತ್ವದ್ದೆಂದು ತಿಳಿಸಿದರು. ತಾಯಿಯಷ್ಟೇ ಜವಾಬ್ದಾರಿ ತಂದೆಗೂ ಇದ್ದು, ಮಗುವಿನ ಲಾಲನೆ–ಪಾಲನೆ ಹಾಗೂ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ತಂದೆಯೂ ಸಕ್ರಿಯವಾಗಿ ಭಾಗವಹಿಸಬೇಕು ಎಂದರು. ಮಕ್ಕಳು ತಮ್ಮ ಹೆತ್ತವರನ್ನು ಅನುಕರಿಸಿ ಜೀವನ ರೂಪಿಸಿಕೊಳ್ಳುವುದರಿಂದ ಮನೆಯ ವಾತಾವರಣವೇ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರಮುಖವಾಗಿದೆ. ಹೆತ್ತವರ ಭಾಷೆ, ನಡೆನುಡಿ, ಜೀವನಶೈಲಿ ಹಾಗೂ ಮೌಲ್ಯಗಳು ಮಕ್ಕಳ ಮೇಲೆ ಆಳವಾದ ಪ್ರಭಾವ ಬೀರುತ್ತವೆ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಪ್ರದಾಯ ಮತ್ತು ಮೌಲ್ಯಗಳ ಜೊತೆಗೆ ಆರೋಗ್ಯಕರ ಆಹಾರ ಪದ್ಧತಿ ಅಗತ್ಯವಿದೆ. ಜಂಕ್ ಫುಡ್‌ಗಳಿಂದ ದೂರವಿದ್ದು, ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಬೇಕು. ಜೊತೆಗೆ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಆಟಗಳು ಹಾಗೂ ಪದಬಂಧಗಳಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕೆಂದರು.
ಪರಿಸರ ಸ್ನೇಹಿ ಹಾಗೂ ಸುಸ್ಥಿರ ವಾತಾವರಣವನ್ನು ಉತ್ತೇಜಿಸುವುದರಿಂದ ಮಕ್ಕಳಲ್ಲಿ ಸ್ವಚ್ಛತೆ, ಹಸಿರು ಚಿಂತನೆ ಮತ್ತು ಜೀವವೈವಿಧ್ಯದ ಅರಿವು ಮೂಡುತ್ತದೆ ಎಂದು ಅವರು ಹೇಳಿದರು. ಬಳಿಕ ಶಾಲಾ ಮಕ್ಕಳಿಗೆ ಸ್ವಚ್ಛತೆ, ಪರಿಸರ ಕಾಳಜಿ, ಜಂಕ್ ಫುಡ್ ಹಾಗೂ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ವತಿಯಿಂದ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಅನಂತ ನಾಯ್ಕ, ಉಪಾಧ್ಯಕ್ಷೆ ಶೈಲಾ ನಾಯ್ಕ, ಗ್ರಾಮ ಪಂಚಾಯತ್ ಅಧ್ಯಕ್ಷೆ ರಜನಿ ನಾಯ್ಕ, ಸದಸ್ಯ ಶೇಷಗಿರಿ ನಾಯ್ಕ, ಡಯಟ್ ಕುಮಟಾದ ಉಪನ್ಯಾಸಕರಾದ ಎಸ್.ಪಿ. ಭಟ್, ಸವಿತಾ ನಾಯ್ಕ, ವೀಣಾ ಭಟ್, ಮುಖ್ಯ ಶಿಕ್ಷಕಿ ಗಂಗಾ ಮೊಗೇರ,ಶಿಕ್ಷಕರಾದ ಜಯಶ್ರೀ ಆಚಾರಿ,ವಿಜಯಕುಮಾರ ನೆರ್ವೇಕರ್,ಲತಾ ಕೆ ಎಂ, ದೀಪಾ ದೇವಾಡಿಗ,ನೂತನ ನಾಯ್ಕ, ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾರ್ಥಿಗಳು,ಪಾಲಕರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
29/01/2026 04:47 pm