ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ನೇಹಿತರ ಸ್ಫೋಟಕ ಹೇಳಿಕೆ : ರಾಯ್ ಸಾವಿನ ಹಿಂದೆ ಐ.ಟಿ ದಾಳಿಯ ಕರಿನೆರಳು

ಬೆಂಗಳೂರು: ಉದ್ಯಮಿ ಸಿ. ಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರಿದಿದ್ದು, ಸಾವಿನ ಹಿಂದಿನ ರಹಸ್ಯಗಳನ್ನು ಭೇದಿಸಲು ಯತ್ನಿಸುತ್ತಿರುವಾಗ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ.

ಅಶೋಕನಗರ ಪೊಲೀಸರು ರಾಯ್ ಅವರ ಆಪ್ತ ಸ್ನೇಹಿತರು ಮತ್ತು ದೈನಂದಿನ ಸಂಪರ್ಕದಲ್ಲಿದ್ದ ಸಿಬ್ಬಂದಿ ಸೇರಿದಂತೆ 12ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರಾಯ್ ಆಪ್ತರು ಹಲವು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದು, ಸಿ. ಜೆ. ರಾಯ್ ಕಳೆದ ಕೆಲವು ದಿನಗಳಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.

ಇತ್ತೀಚೆಗೆ ರಾಯ್ ಮೊದಲಿನಂತೆ ಇರಲಿಲ್ಲ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಆದಾಗ್ಯೂ, ಅವರು ಯಾವ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರ ಮುಂದೆ ರಾಯ್ ಅವರ ಸ್ನೇಹಿತರು ಒಂದೇ ರೀತಿಯ ಹೇಳಿಕೆಗಳನ್ನು ನೀಡಿದ್ದು, ಎಲ್ಲರ ಬಾಯಲ್ಲೂ ಆದಾಯ ತೆರಿಗೆ ಅಧಿಕಾರಿಗಳ ಬಗ್ಗೆಯೇ ಮಾತುಗಳು ಕೇಳಿಬಂದಿವೆ.

ಐ. ಟಿ ದಾಳಿಯಿಂದಲೇ ಸಿ.ಜೆ. ರಾಯ್ ತೀವ್ರವಾಗಿ ತಲೆಕೆಡಿಸಿಕೊಂಡಿದ್ದರು ಮತ್ತು ಇದೇ ಅವರ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಸ್ನೇಹಿತರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಐ.ಟಿ ದಾಳಿಯಿಂದ ರಾಯ್ ಮತ್ತಷ್ಟು ಕುಗ್ಗಿದ್ದರು ಮತ್ತು ಇದರಿಂದ ತೀವ್ರವಾಗಿ ಮನನೊಂದಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.

ಈ ಕುರಿತು ರಾಯ್ ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಲ್ಲ ವಿಚಾರಗಳನ್ನು ಪೊಲೀಸರ ಮುಂದೆ ಬಹಿರಂಗಪಡಿಸಲಾಗಿದೆ. ರಾಯ್ ಅವರ ಸ್ನೇಹಿತರೊಬ್ಬರು ಪದೇ ಪದೇ ಐ.ಟಿ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದರಿಂದ, ಪೊಲೀಸರು ಕೆಲವು ಐ.ಟಿ ಅಧಿಕಾರಿಗಳನ್ನೂ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಐ.ಟಿ ಅಧಿಕಾರಿಗಳು, ಸಿ.ಜೆ. ರಾಯ್ ಸಾವಿನ ಬಗ್ಗೆ ನಮಗೆ ಗೊತ್ತಿರಲಿಲ್ಲ, ನಾವು ನಮ್ಮ ಕೆಲಸ ಮಾಡುತ್ತಿದ್ದೆವು ಎಂದು ಹೇಳಿಕೆ ನೀಡಿದ್ದಾರೆ. ಪೊಲೀಸರು ಬರುವವರೆಗೂ ಅಲ್ಲಿ ಸಾವು ಸಂಭವಿಸಿದೆ ಎಂದು ನಮಗೆ ತಿಳಿದಿರಲಿಲ್ಲ. ನಾವು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದೆವು ಮತ್ತು ದಾಖಲೆಗಳಿಗೆ ಸಂಬಂಧಿಸಿದಂತೆ ಅವರಿಂದ ಮಾಹಿತಿ ಕೇಳಿದ್ದೆವು. ನಂತರ ಕಚೇರಿಯ ಕೆಲವು ಸ್ಥಳಗಳಲ್ಲಿ ನಮ್ಮ ದಾಳಿಯನ್ನು ಮುಂದುವರೆಸಿದ್ದೆವು ಎಂದು ಐ.ಟಿ ಅಧಿಕಾರಿಗಳು ತಿಳಿಸಿದ್ದಾರೆ. ಸಿ.ಜೆ. ರಾಯ್ ಅವರ ಮನಸ್ಥಿತಿ ಬಗ್ಗೆ ಕುಟುಂಬಸ್ಥರು ಸಹ ಹೇಳಿಕೆ ನೀಡಿದ್ದಾರೆ. 'ಈ ಹಿಂದೆಯೂ ಐ.ಟಿ ದಾಳಿಗಳು ನಡೆದಿದ್ದವು, ಆದರೆ ಈ ಮಟ್ಟದ ಆತಂಕ ಅಥವಾ ಒತ್ತಡ ಇರಲಿಲ್ಲ. ಯಾವ ವಿಚಾರಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿದ್ದರು ಎಂಬುದು ನಮಗೆ ಗೊತ್ತಿಲ್ಲ. ಬಹುಶಃ ಅವರು ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿರಬೇಕು. ಕುಟುಂಬಸ್ಥರೊಂದಿಗೆ ಅವರು ಸಾಮಾನ್ಯವಾಗಿ ವರ್ತಿಸುತ್ತಿದ್ದರು' ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಸದ್ಯ ಸಿ.ಜೆ. ರಾಯ್ ಸಾವಿನ ಹಿಂದಿನ ರಹಸ್ಯವನ್ನು ಭೇದಿಸಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Edited By :
PublicNext

PublicNext

01/02/2026 03:00 pm

Cinque Terre

8.35 K

Cinque Terre

1

ಸಂಬಂಧಿತ ಸುದ್ದಿ