ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟ್ಯೂಷನ್‌ಗೆ ಹೆದರಿ ಮನೆ ಬಿಟ್ಟ ಮಕ್ಕಳು ಪತ್ತೆ - ಆಧಾರ್ ಬಳಸಿ ರಾಜ್ಯ ಸುತ್ತಿದ 13ರ ಪೋರಿ

ಬೆಂಗಳೂರು: ಟ್ಯೂಷನ್‌ಗೆ ಹೋಗಲು ನಿರಾಕರಿಸಿದ ಕಾರಣಕ್ಕೆ ಪೋಷಕರು ಬೈದಿದ್ದಕ್ಕೆ ಕೋಪಗೊಂಡ 13 ವರ್ಷದ ಬಾಲಕಿ, ತನ್ನ 9 ವರ್ಷದ ತಮ್ಮನೊಂದಿಗೆ ಮನೆ ಬಿಟ್ಟು ಹೋಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾರತ್ತಹಳ್ಳಿಯ ಅಶ್ವತ್ಥನಗರದಲ್ಲಿ ವಾಸವಿದ್ದ ಸಹೋದರ-ಸಹೋದರಿ, ಫೆಬ್ರವರಿ 1ರಂದು ಸಂಜೆ 3 ಗಂಟೆ ಸುಮಾರಿಗೆ ತಮ್ಮ ಮನೆಯಿಂದ ಹೊರಟಿದ್ದರು.

ಮನೆ ಬಿಟ್ಟು ತೆರಳಿದ ಮಕ್ಕಳು ರಾಜ್ಯದ ಹಲವೆಡೆ ಸುತ್ತಾಟ ನಡೆಸಿದ್ದರು. ವಿಶೇಷವೆಂದರೆ, 13 ವರ್ಷದ ಬಾಲಕಿ ತನ್ನ ಆಧಾರ್ ಕಾರ್ಡ್ ನೆರವಿನಿಂದಲೇ ರಾಜ್ಯದ ವಿವಿಧೆಡೆ ಉಚಿತವಾಗಿ ಪ್ರಯಾಣಿಸಿದ್ದು, 9 ವರ್ಷದ ತಮ್ಮನನ್ನು ಟಿಕೆಟ್ ಇಲ್ಲದೆ ಕರೆದೊಯ್ದಿದ್ದಾಳೆ. ಇವರು ಶಿವಮೊಗ್ಗ ಸೇರಿದಂತೆ ಚಿತ್ರದುರ್ಗದವರೆಗೂ ಪ್ರಯಾಣ ಬೆಳೆಸಿದ್ದರು.

ಕಾರ್ಯಾಚರಣೆ ಮಕ್ಕಳು ಕಾಣೆಯಾದ ತಕ್ಷಣ ಪೋಷಕರು ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಹೆಚ್‌ಎಎಲ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಕ್ಕಳ ಬಗ್ಗೆ ಮಾಹಿತಿ ರವಾನಿಸಲಾಯಿತು. ಅಲ್ಲದೆ, ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಾರ್ವಜನಿಕರ ನೆರವು ಕೋರಲಾಯಿತು.

ಪೊಲೀಸರ ಸತತ ಪ್ರಯತ್ನ ಹಾಗೂ ಸಾರ್ವಜನಿಕರ ಸಹಕಾರದ ಫಲವಾಗಿ ಮಕ್ಕಳು ಪತ್ತೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೋಟೋ ನೋಡಿದ ಚಿತ್ರದುರ್ಗದ ಸಾರ್ವಜನಿಕರೊಬ್ಬರು ಹೆಚ್‌ಎಎಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಮಕ್ಕಳನ್ನು ಚಿತ್ರದುರ್ಗದಿಂದ ಕರೆತಂದು ಹೆಚ್‌ಎಎಲ್ ಠಾಣೆಯಲ್ಲಿ ಪೋಷಕರಿಗೆ ಒಪ್ಪಿಸಿದ್ದಾರೆ. ಇದರಿಂದ ಪೋಷಕರ ಆತಂಕ ದೂರವಾಗಿದ್ದು, ಸಾರ್ವಜನಿಕರ ನೆರವಿಗೆ ಪೊಲೀಸರು ಕೃತಜ್ಞತೆ ಸಲ್ಲಿಸಿದ್ದಾರೆ.

Edited By : Vijay Kumar
PublicNext

PublicNext

04/02/2026 09:10 am

Cinque Terre

5.02 K

Cinque Terre

0

ಸಂಬಂಧಿತ ಸುದ್ದಿ