ಬೆಂಗಳೂರು: ನಗರದ ಪ್ರತಿಷ್ಠಿತ ಅಯೋಧ್ಯೆ ಉಪಚಾರ್ ಹೋಟೆಲ್‌ನಲ್ಲಿ ಬರೋಬ್ಬರಿ 2.5 ಲಕ್ಷ ರೂಪಾಯಿ ನಗದು ಕಳ್ಳತನವಾಗಿದೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಬಜಾರ್ ಔಟರ್ ರಿಂಗ್ ರೋಡ್ ಬಳಿ ಇರುವ ಈ ಹೋಟೆಲ್‌ನಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.
ಕಳೆದ 2ನೇ ತಾರೀಖು ಮಧ್ಯರಾತ್ರಿ 1.45ರ ಸುಮಾರಿಗೆ ನಾಲ್ವರು ಯುವಕರ ಗ್ಯಾಂಗ್ ಹೋಟೆಲ್‌ಗೆ ನುಗ್ಗಿದೆ. ಕಬ್ಬಿಣದ ರಾಡ್ ಬಳಸಿ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕ್ಯಾಶ್ ಕೌಂಟರ್‌ನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಕೃತ್ಯದಲ್ಲಿ ಇಬ್ಬರು ಕಳ್ಳರು ನೇರವಾಗಿ ಬೀಗ ಮುರಿದು ಹಣ ಕದ್ದರೆ, ಉಳಿದ ಇಬ್ಬರು ಹೋಟೆಲ್ ಹೊರಗೆ ನಿಂತು ಕಾವಲು ಕಾಯ್ದಿದ್ದಾರೆ.
ಬೆಳಗ್ಗೆ ಹೋಟೆಲ್ ಸಿಬ್ಬಂದಿ ಕ್ಯಾಶ್ ಕೌಂಟರ್ ಪರಿಶೀಲಿಸಿದಾಗ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಹೋಟೆಲ್ ಮ್ಯಾನೇಜರ್ ಸಿಕೆ ಅಚ್ಚುಕಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಹೋಟೆಲ್‌ನಲ್ಲಿದ್ದ ಸಿಸಿಟಿವಿ ಡಿವಿಆರ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಸದ್ಯ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
PublicNext
04/02/2026 11:44 am
LOADING...