ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಭಾರತವನ್ನು ಜಾಗತಿಕ ಶಕ್ತಿಯಾಗಿಸುವ ಐತಿಹಾಸಿಕ ಬಜೆಟ್: ಶಾಸಕಿ ಶಶಿಕಲಾ ಜೊಲ್ಲೆ

ಚಿಕ್ಕೋಡಿ: ಕೇಂದ್ರ ಸರಕಾರದ ಮೋದಿ ಆಡಳಿತಾವಧಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿ, ಮುನ್ನುಗ್ಗುತ್ತಿದೆ. ಜಗತ್ತಿನಲ್ಲೇ ಭಾರತಾಂಬೆಯನ್ನು ಗುರುವಿನ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಇಂದಿನ ವಿತ್ತ ಮಂತ್ರಿ ಬಜೆಟ್ ಮಂಡಿಸಿದ್ದಾರೆ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಶ್ಲಾಘಿಸಿದರು.

ಸಮಗ್ರ ಅಭಿವೃದ್ಧಿಗೆ ಒತ್ತು

ಚಿಕ್ಕೋಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರಕಾರದ ಬಜೆಟ್ ಕುರಿತು ಮಾಹಿತಿ ನೀಡಿದ ಶಾಸಕಿ ಶಶಿಕಲಾ ಜೊಲ್ಲೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಈ ಬಜೆಟ್ ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಭಾರತೀಯ ಸೇನೆ ಮತ್ತು ಕೃಷಿ ಕ್ಷೇತ್ರಗಳಿಗೆ ಹೆಚ್ಚಿನ ಗಮನ ಹರಿಸಿದೆ. ಇದು ಭಾರತದ ಸಮಗ್ರ ಬೆಳವಣಿಗೆಗೆ ಅಪಾರ ಪುಷ್ಟಿ ನೀಡಲಿದೆ ಎಂದು ಹೇಳಿದರು. ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿಯೊಂದಿಗೆ 'ವಿ.ವಿ.ಜಿ. ರಾಮ್‌ಜಿ ಯೋಜನೆ'ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪಶು ವೈದ್ಯಕೀಯ ಕಾಲೇಜುಗಳ ಸ್ಥಾಪನೆಯೊಂದಿಗೆ ಪಶು ಸಾಕಾಣಿಕೆಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಹಿಳೆಯರ ಸಶಕ್ತೀಕರಣಕ್ಕಾಗಿ 'ಶ್ರೀ ಮಾರ್ಚ್ ಯೋಜನೆ'ಯನ್ನು ಜಾರಿಗೊಳಿಸಲಾಗಿದ್ದು, ಪ್ರತಿ ಜಿಲ್ಲೆಗೊಂದರಂತೆ ಮಹಿಳೆಯರ ಶಿಕ್ಷಣಕ್ಕೆ ಸಹಕಾರಿಯಾಗಲು ವಸತಿ ನಿಲಯಗಳನ್ನು ಸ್ಥಾಪಿಸಲಾಗುವುದು ಎಂದು ಅವರು ವಿವರಿಸಿದರು.

ಸೇನಾ ಬಲವರ್ಧನೆ ಮತ್ತು ಜನಪರ ಯೋಜನೆಗಳು

ಬಿಜೆಪಿ ಮುಖಂಡ ಸಂಜಯ್ ಪಾಟೀಲ್ ಮಾತನಾಡಿ, ಕೇಂದ್ರ ಸರಕಾರದ 9ನೇ ಐತಿಹಾಸಿಕ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ಸೀತಾರಾಮನ್ ಅವರು ಭಾರತೀಯ ನಾರಿಯರಿಗೆ ಮತ್ತಷ್ಟು ಬಲ ತುಂಬಿದ್ದಾರೆ. ಈ ಹಿಂದೆ ಚೀನಾ ವಿರುದ್ಧ ಸಮರ್ಪಕ ಶಸ್ತ್ರಾಸ್ತ್ರಗಳಿಲ್ಲದೆ ಸೋಲು ಕಂಡಿದ್ದ ಭಾರತಕ್ಕೆ, ಇಂದಿನ ಬಜೆಟ್ ಸೇನೆಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಶಸ್ತ್ರಾಸ್ತ್ರ ಹಾಗೂ ಉಪಕರಣಗಳಿಗೆ ಆರ್ಥಿಕ ಬಲ ತುಂಬಿದೆ. ಭಾರತದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಮಂಡಿಸಿರುವ ಈ ಬಜೆಟ್ ಜನಪರವಾಗಿದೆ ಎಂದು ಶ್ಲಾಘಿಸಿದರು. ಅವರು ಕ್ಷೇತ್ರವಾರು ಬಜೆಟ್‌ನಲ್ಲಿ ಮೀಸಲಿರಿಸಲಾದ ಅಂಕಿಅಂಶಗಳನ್ನು ಸಹ ವಿವರಿಸಿದರು.

ಉಪಸ್ಥಿತರು

ಈ ಸಂದರ್ಭದಲ್ಲಿ ಚಿಕ್ಕೋಡಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಅಪ್ಪಾಜಿಗೋಳ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಬಿಜೆಪಿ ಮುಖಂಡರಾದ ವಿವೇಕರಾವ್ ಪಾಟೀಲ, ಬಸವರಾಜ ಹುಂದ್ರಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
PublicNext

PublicNext

01/02/2026 06:33 pm

Cinque Terre

11.66 K

Cinque Terre

0

ಸಂಬಂಧಿತ ಸುದ್ದಿ