ಸಾಗರ: ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗಾಗಿ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೂ ಇಲಾಖೆ ವಿಶೇಷ ಒತ್ತು ನೀಡಿದ್ದು, ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಬೇಕು ಎಂದು ಪೊಲೀಸ್ ಉಪಾಧೀಕ್ಷಕ ಡಾ. ಬೆನಕಪ್ರಸಾದ್ ಎನ್.ಜೆ. ತಿಳಿಸಿದರು.
ಇಲ್ಲಿನ ಡಿವೈಎಸ್‌ಪಿ ಕಚೇರಿಯಲ್ಲಿ ಸೋಮವಾರ ಜಾತ್ರೆ ಹಿನ್ನೆಲೆಯಲ್ಲಿ ಇಲಾಖೆ ಕೈಗೊಂಡಿರುವ ಕ್ರಮ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಹೊರ ತಾಲ್ಲೂಕುಗಳಿಂದ ಬರುವವರಿಗೆ ವಾಹನ ಪಾರ್ಕಿಂಗ್‌ಗಾಗಿ ವಿಶೇಷ ವ್ಯವಸ್ಥೆ ಮಾಡಿದೆ. ಸೊರಬ ರಸ್ತೆ ಮೂಲಕ ದುರ್ಗಾಂಬಾ ವೃತ್ತ ಬಳಸಿ ಗಣಪತಿ ಕೆರೆಯ ಕೊಪ್ಪಲಗದ್ದೆಯಲ್ಲಿರುವ ಮಾರಿಕಾಂಬಾ ದೇವಸ್ಥಾನದ ಜಾಗದಲ್ಲಿ ಹೆಚ್ಚಿನ ವಾಹನ ವ್ಯವಸ್ಥೆಗೆ ಅವಕಾಶ ಕಲ್ಪಿಸಿದೆ. ಶಿವಮೊಗ್ಗ ರಸ್ತೆಯಲ್ಲಿ ಶಿವಲಿಂಗಪ್ಪ ಪ್ರೌಢಶಾಲೆ ಮೈದಾನ, ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ವಾಹನ ಪಾರ್ಕಿಂಗ್ ಮಾಡಬಹುದು. ಜೋಗ ರಸ್ತೆಯಲ್ಲಿ ಪ್ರಗತಿಶಾಲೆ ಮೈದಾನದಲ್ಲಿ ವಾಹನ ಸಂಚಾರ ಮಾಡಬಹುದು.
ಸಿಗಂದೂರು ರಸ್ತೆಯಲ್ಲಿ ಎಸ್.ಎನ್.ವೃತ್ತದಿಂದ ಮಹಾಲಕ್ಷ್ಮಿ ರೈಸ್‌ಮಿಲ್‌ವರೆಗೆ ರಸ್ತೆ ಕಿರಿದಾಗಿರುವುದರಿಂದ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ನಿಲ್ಲಿಸುವಂತೆ ಇಲ್ಲ. ಇದನ್ನು ನೋ ಪಾರ್ಕಿಂಗ್ ಜೋನ್ ಎಂದು ಘೋಷಣೆ ಮಾಡಿದೆ. ಬಿ.ಎಚ್.ರಸ್ತೆಯ ಒಂದು ಭಾಗದಲ್ಲಿ ಮಾತ್ರ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಿದ್ದು, ಎದುರು ಭಾಗದಲ್ಲಿ ಕಾನೂನು ಮೀರಿ ವಾಹನ ನಿಲ್ಲಿಸಿದರೆ ಅಂತಹ ವಾಹನ ಠಾಣೆಗೆ ಒಯ್ದು ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಾತ್ರೆ ಮುಗಿಯುವ ತನಕ ಬಿ.ಎಚ್.ರಸ್ತೆಯ ಎಚ್.ಪಿ. ಪೆಟ್ರೋಲ್ ಬಂಕ್ ಪಕ್ಕದ ಬಸ್ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಪ್ರಯಾಣಿಕರು ಟಿವಿಎಸ್ ಶೋರೂಂ ಪಕ್ಕದಲ್ಲಿರುವ ಬಸ್ ನಿಲ್ದಾಣದಲ್ಲಿಯೇ ಬಸ್ ಹತ್ತಬೇಕು. ದೇವರ ಪ್ರತಿಷ್ಠಾಪನೆ ಮಾಡಿದ ಮೇಲೆ ದುರ್ಗಾಂಬಾ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಯಾವುದೇ ವಾಹನ ನಿಲ್ಲಿಸಲು ಅವಕಾಶ ಇಲ್ಲ. ಭಕ್ತರನ್ನು ವಾಹನದಲ್ಲಿ ಬಿಟ್ಟು ಪಾರ್ಕಿಂಗ್ ಸ್ಥಳದಲ್ಲಿ ವಾಹನ ಇರಿಸಬೇಕು. ಸಾರ್ವಜನಿಕರು ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.
PublicNext
02/02/2026 07:33 pm