ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿ.ಜೆ. ರಾಯ್ ಆತ್ಮಹತ್ಯೆ ಕೇಸ್‌ : ಸಾವಿಗೂ ಮುನ್ನ ಮನೋವೈದ್ಯರ ಕೌನ್ಸೆಲಿಂಗ್, ಹೊರಬಿದ್ದ ಸ್ಫೋಟಕ ಮಾಹಿತಿ!

ಬೆಂಗಳೂರು : ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಹೊಸ ಆಯಾಮ ಪಡೆಯುತ್ತಿದೆ. ಆದಾಯ ತೆರಿಗೆ ಇಲಾಖೆಯ ತನಿಖೆ ನಡೆಯುತ್ತಿದ್ದಾಗಲೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಅವರ ಸುತ್ತ ಹಲವು ಅನುಮಾನಗಳು ಸುಳಿದಾಡುತ್ತಿವೆ. ಈ ಮಧ್ಯೆ, ರಾಯ್ ಅವರ ಸಾವಿಗೆ ಮಾನಸಿಕ ಸ್ಥಿತಿಯೇ ಕಾರಣವೇ ಎಂಬ ಪ್ರಶ್ನೆಗೆ ಪುಷ್ಠಿ ನೀಡುವ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ಅವರು ಕಳೆದ ಹಲವು ದಿನಗಳಿಂದ ಮನೋವೈದ್ಯರಿಂದ ಕೌನ್ಸೆಲಿಂಗ್ ಪಡೆಯುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ತಮ್ಮ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೇವಲ 15 ನಿಮಿಷಗಳಲ್ಲಿ ಹೇಗೆ ಬಂತು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಇದಕ್ಕೆ ಉತ್ತರವೆಂಬಂತೆ, ಸಿ.ಜೆ. ರಾಯ್ ಕಳೆದ ಹಲವು ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಈ ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸಿಕೊಳ್ಳಲು ಅವರು ಬೆಂಗಳೂರಿನ ಖ್ಯಾತ ಮನೋವಿಜ್ಞಾನಿಯೊಬ್ಬರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹೊರನೋಟಕ್ಕೆ ಆರೋಗ್ಯವಾಗಿದ್ದಂತೆ ಕಂಡರೂ, ಒಳಗೊಳಗೆ ತೀವ್ರ ಮಾನಸಿಕ ಸಂಕಷ್ಟದಲ್ಲಿದ್ದ ರಾಯ್, ಚಿಕಿತ್ಸೆ ಪಡೆಯುತ್ತಿದ್ದರೂ ಖಿನ್ನತೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದೆ ಈ ದಿಢೀರ್ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.

ಆತ್ಮಹತ್ಯೆಗೆ ಶರಣಾಗುವ ಹಿಂದಿನ ದಿನವಷ್ಟೇ, ನಗರದ ಜಯನಗರ 8ನೇ ಬ್ಲಾಕ್‌ನಲ್ಲಿರುವ ಖ್ಯಾತ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಸಿ.ಜೆ. ರಾಯ್ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ಪಡೆದಿದ್ದರು. ಈ ವೇಳೆ, ವೈದ್ಯರೊಂದಿಗೆ ಜೀವನದ ಒತ್ತಡಗಳು ಮತ್ತು ವೈಯಕ್ತಿಕ ಸಂಕಷ್ಟಗಳ ಕುರಿತು ಅವರು ಮನಬಿಚ್ಚಿ ಮಾತನಾಡಿದ್ದರಂತೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಜೀವನ ಮತ್ತು ಸಾವಿನ ಕುರಿತು ಪದೇಪದೇ ಚರ್ಚಿಸುತ್ತಿದ್ದ ರಾಯ್, ಸಾವಿನ ವಿಷಯವನ್ನೇ ಆಧರಿಸಿ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಿ.ಜೆ. ರಾಯ್ ಅವರ ಕಚೇರಿ ಚೇಂಬರ್ ಸಂಪೂರ್ಣವಾಗಿ ಸೌಂಡ್‌ಪ್ರೂಫ್ ಆಗಿತ್ತು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ದೈನಂದಿನ ವ್ಯವಹಾರಗಳು ಹೊರಗೆ ಕೇಳಿಸಬಾರದೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ಈ ಕೊಠಡಿಯಲ್ಲಿ ಒಳಗಿನ ಯಾವುದೇ ಶಬ್ದ ಹೊರಗೆ ಕೇಳಿಸುತ್ತಿರಲಿಲ್ಲ. ಇದೇ ಕಾರಣಕ್ಕೆ, ಘಟನೆ ನಡೆದು ಸುಮಾರು 20 ನಿಮಿಷಗಳಾದರೂ ಸಿಬ್ಬಂದಿಗೆ ಏನೂ ತಿಳಿದಿರಲಿಲ್ಲ. ರಾಯ್ ಅವರು ದೀರ್ಘಕಾಲದವರೆಗೆ ಕೊಠಡಿಯಿಂದ ಹೊರಬಾರದ ಕಾರಣ, ಸಿಬ್ಬಂದಿ ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ತೆರೆದು ನೋಡಿದಾಗ, ರಾಯ್ ಕುರ್ಚಿಯ ಮೇಲೆ ಕುಸಿದು ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

Edited By : Nirmala Aralikatti
PublicNext

PublicNext

02/02/2026 08:01 pm

Cinque Terre

27.52 K

Cinque Terre

0

ಸಂಬಂಧಿತ ಸುದ್ದಿ