ಶಿರಸಿ: ಶಿರಸಿ ತಾಲೂಕಿನ ಚಿಪಗಿ ಗ್ರಾಮದಲ್ಲಿ ಹಾದು ಹೋಗುವ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ವೇಗ ನೀಡಲು ಸಾರ್ವಜನಿಕರಿಂದ ಜನಾಕ್ರೋಶ ಮತ್ತು ಗುತ್ತಿಗೆದಾರರ ವಿರುದ್ಧ ಪ್ರತಿಭಟನೆ ಫೆಬ್ರವರಿ 2ರಂದು ನಡೆಯಿತು.
ಸಾಗರಮಾಲಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿದ್ದು, ಹೆದ್ದಾರಿ ಕಾಮಗಾರಿಯಿಂದ ವಿಪರೀತವಾಗಿ ಧೂಳು ಆವರಿಸಿಕೊಳ್ಳುತ್ತಿದೆ. ಇದರಿಂದ ಸಾರ್ವಜನಿಕರ, ಮಕ್ಕಳ ಹಾಗೂ ವಯೋ ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಗ್ರಾಪಂ ಪ್ರತಿನಿಧಿಗಳ ತಾಲೂಕು ಒಕ್ಕೂಟದ ಅಧ್ಯಕ್ಷರಾದ ನವೀನ ಶೆಟ್ಟಿ ತಮ್ಮ ಆಕ್ರೋಶ ಹೊರಹಾಕಿದರು.
ಅಲ್ಲದೇ ಈ ಹಿಂದೆ ಇದೇ ರೀತಿ ಗುತ್ತಿಗೆದಾರರ ವಿರುದ್ದ ಪ್ರತಿಭಟನೆ ನಡೆಸಿದಾಗ ಗುತ್ತಿಗೆದಾರ ಎಮ್ಎಸ್ ಖಾನ್ ಫೆ.15ರ ಒಳಗಾಗಿ ಕಾಮಗಾರಿಯನ್ನು ಒಂದು ಬದಿಗೆ ಮಾಡಿ ಕೊಡಲಾಗುವುದು ಎಂದು ಸಾರ್ವಜನಿಕರ ಸಮ್ಮುಖದಲ್ಲಿ ಭರವಸೆ ನೀಡಿದ್ದರು. ಈಗ ಇದುವರೆಗೂ ಕಾಮಗಾರಿ ಆಗದೇ ಇರುವುದರಿಂದ ನವೀನ್ ಶೆಟ್ಟಿ ನೇತೃತ್ವದಲ್ಲಿ ಜನಾಕ್ರೋಶ ನಡೆಸಿ, ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಗುತ್ತಿಗೆದಾರರಿಗೆ ಒತ್ತಾಯಿಸಲಾಯಿತು.
ರಸ್ತೆ ಕಾಮಗಾರಿಯಿಂದ ಓಡಾಡುವವರು ಧೂಳಿನಿಂದ ಬೇಸತ್ತು ಹೋಗಿದ್ದು, ಚರಂಡಿ ಮಾಡಲು ಹೊಂಡ ತೋಡಿದ್ದರೂ ವಿದ್ಯುತ್ ಕಂಬಗಳ ಸ್ಥಳಾಂತರ ಆಗದೆ ಕೆಲಸ ಸ್ಥಗಿತಗೊಂಡಿದೆ. ವಿದ್ಯುತ್ ಕಂಬಗಳು ಆಧಾರವಿಲ್ಲದೆ ಬಾಗಿಕೊಂಡು ಅವಘಡ ಉಂಟಾಗುವ ಆತಂಕವಿದೆ. ಚರಂಡಿಗೆ ಕಬ್ಬಿಣ ಹಾಕಿ ಹತ್ತು ದಿನಗಳು ಕಳೆದರೂ ಕಾಮಗಾರಿ ವೇಗ ಪಡೆದಿಲ್ಲ ಎಂದು ಆಕ್ರೋಶಗೊಂಡರು.
ಸಂಸದರು, ಶಾಸಕರು ಗುತ್ತಿಗೆದಾರರಿಗೆ ಮಾರಿಕಾಂಬ ಜಾತ್ರೆಯೊಳಗೆ ಒಂದು ಬದಿಯ ಕಾಮಗಾರಿ ಮುಗಿಸುವ ಗಡುವು ನೀಡಿದ್ದಾರೆ. ಸಂಬಂಧಿತರು ಗುಣಮಟ್ಟದ ಬಗ್ಗೆ ಎಚ್ಚರ ವಹಿಸಿ ಅತಿ ವೇಗವಾಗಿ ಕೆಲಸ ಮಾಡಬೇಕು ಎಂದು ಜನರು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ರವಿ ಹೆಗಡೆ, ರಾಜು ಶೆಟ್ಟಿ, ರಾಮ ಪೂಜಾರಿ, ಶೇಖರ ಪೂಜಾರಿ ಸೇರಿದಂತೆ ಮಹಿಳಾ ಜನಪ್ರತಿನಿಧಿಗಳು, ಹಿರಿಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
PublicNext
03/02/2026 07:30 am