ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಅಹಿಂದ ಸಂಘಟನೆಗಳನ್ನು ಬಲಪಡಿಸಿ ಜನರಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ನಾಗೇಶ ನಾಯ್ಕ ಕಾಗಾಲ ಹೇಳಿದರು.ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಹಿಂದ ಸಂಘಟನೆಯನ್ನು ಸಂಘಟಿತವಾಗಿ ಬಲಪಡಿಸುವ ಉದ್ದೇಶದಿಂದ ಎಲ್ಲ ತಾಲೂಕುಗಳಲ್ಲಿ ಸಭೆಗಳನ್ನು ನಡೆಸಿ ಚರ್ಚಿಸಲಾಗುತ್ತಿದೆ ಎಂದರು.
ಯುವಜನರನ್ನು ರಾಜಕೀಯವಾಗಿ ಸಶಕ್ತರನ್ನಾಗಿಸುವ ಜೊತೆಗೆ ಸಂವಿಧಾನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲಾಗುವುದು. ಸಾಮಾಜಿಕ ಚಳವಳಿಗಳ ಬಲವರ್ಧನೆಯ ಮೂಲಕ ರಾಜಕೀಯ ಸಬಲೀಕರಣ ಸಾಧಿಸುವ ನಿಟ್ಟಿನಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಚಲನ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳನ್ನು ಆಧಾರವಾಗಿಸಿಕೊಂಡು ಹೋರಾಟದ ತಳಹದಿ ರೂಪಿಸಲಾಗುವುದು; ಭಟ್ಕಳದಲ್ಲಿ ಎಲ್ಲಾ ಪ್ರಮುಖರು ಅಹಿಂದ ಸಂಘಟನೆ ಬಲಪಡಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ, ಹೆದ್ದಾರಿ ಸಮಸ್ಯೆ, ಇ-ಸ್ವತ್ತು, ಅರಣ್ಯ ಅತಿಕ್ರಮಣದಂತಹ ಗಂಭೀರ ಸಮಸ್ಯೆಗಳಿದ್ದು, ಈ ಕುರಿತು ಜನಜಾಗೃತಿ ಮೂಡಿಸಿ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೆದ್ದಾರಿ ಕಾಮಗಾರಿಗಳ ವಿಳಂಬದ ಕುರಿತು ಈಗಾಗಲೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ವಸೂಲಿ ನಡೆಯುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು. ಅಗತ್ಯವಿದ್ದರೆ ಕರಾವಳಿ ಭಾಗದ ತಾಲೂಕುಗಳ ನ್ಯಾಯಾಲಯಗಳಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
PublicNext
03/02/2026 05:43 pm