ಮಂಗಳೂರು: ಅಪಘಾತ, ಅವಘಡವಾದಲ್ಲಿ ತುರ್ತು ರಕ್ಷಣೆಗೆ ಆ್ಯಂಬುಲೆನ್ಸ್ ಧಾವಿಸುವುದು ಸಾಮಾನ್ಯ. ಆದರೆ ಸಮುದ್ರ, ನದಿಯಲ್ಲಿ ಅವಘಡವಾದಲ್ಲಿ ಜೀವರಕ್ಷಣೆ ಸ್ವಲ್ಪ ಕಷ್ಟ. ಆದರೆ ಇನ್ನು ಮುಂದೆ ಈ ಚಿಂತೆಯ ಅಗತ್ಯವಿಲ್ಲ. ಅವಘಡ ನಡೆದ ತಕ್ಷಣ ಸೈರನ್ ಮೊಳಗಿಸುತ್ತ ನೀರಲ್ಲೇ ಆ್ಯಂಬುಲೆನ್ಸ್ ಹಾಜರಾಗುತ್ತದೆ. ಏನಿದರ ವಿಶೇಷವೆಂಬುದಕ್ಕೆ ಈ ಸುದ್ದಿ ನೋಡಿ.
ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಬೋಟ್ ಆ್ಯಂಬುಲೆನ್ಸ್ ತಯಾರಾಗಿದೆ. ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಮೂರು ಸೀ ಆ್ಯಂಬುಲೆನ್ಸ್‌ಗಳ ಬೇಡಿಕೆ ಇದೆ. ಆದರೆ ಸರ್ಕಾರದಿಂದ ಇನ್ನೂ ಈ ಬೇಡಿಕೆ ಈಡೇರಿಲ್ಲ. ಆದ್ದರಿಂದ ಉಳ್ಳಾಲದ ನಾಡದೋಣಿ ಹಾಗೂ ಗಿಲಿನೆಟ್ ಮೀನುಗಾರರ ಸಂಘದಿಂದ ಬೋಟ್ ಆ್ಯಂಬುಲೆನ್ಸ್ ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದೆ.
ಸಾಮಾನ್ಯ ಬೋಟ್ ಅನ್ನೇ ಬೋಟ್ ಆ್ಯಂಬುಲೆನ್ಸ್ ಮಾರ್ಪಡಿಸಲಾಗಿದೆ. ಇದರಲ್ಲಿ ಸೈರನ್, ಎಮರ್ಜೆನ್ಸಿ ಕೆಂಪು ಲೈಟ್, ಸ್ಟ್ರೆಚ್ಚರ್, ಆಮ್ಲಜನಕ ವೈದ್ಯಕೀಯ ಉಪಕರಣ, ಲೈಫ್ ಜಾಕೆಟ್‌ಗಳ ವ್ಯವಸ್ಥೆಯಿದೆ.
ಮೈಕ್‌ನಲ್ಲಿ ಅನೌನ್ಸ್ ಮಾಡಿಕೊಂಡು ಸೈರನ್ ಹೊಡೆಯುತ್ತಾ ಈ ಬೋಟ್ ಆ್ಯಂಬುಲೆನ್ಸ್ ಬರುತ್ತಿದ್ದರೆ ಉಳಿದ ಬೋಟ್‌ಗಳು ದಾರಿ ಮಾಡಿಕೊಡುತ್ತದೆ. ಇದರಿಂದ ತಕ್ಷಣದಲ್ಲಿ ಅಪಾಯ ನಡೆಯುವ ಸ್ಥಳಕ್ಕೆ ಈ ಆ್ಯಂಬುಲೆನ್ಸ್ ಧಾವಿಸುತ್ತದೆ.
ಈ ಬೋಟ್ ಆ್ಯಂಬುಲೆನ್ಸ್ ಬರೀ ಮಂಗಳೂರು ಭಾಗದಲ್ಲಿ ಮಾತ್ರವಲ್ಲದೆ ಮಲ್ಪೆ, ಮಂಜೇಶ್ವರ ಕಡೆಗಳಲ್ಲೂ ಅವಘಡ ಸಂಭವಿಸಿದರೆ, ಅಲ್ಲಿಗೂ ಧಾವಿಸುತ್ತದೆ.
ಒಟ್ಟಿನಲ್ಲಿ ಸರ್ಕಾರ ಸೀ ಆ್ಯಂಬುಲೆನ್ಸ್‌ಗೆ ಕಾಯದೇ ಮೀನುಗಾರರೇ ಸಾಲಸೋಲ ಮಾಡಿ ಬೋಟ್ ಆ್ಯಂಬುಲೆನ್ಸ್ ನಿರ್ಮಾಣ ಮಾಡಿದ್ದು ಶ್ಲಾಘನೀಯ. ಮುಂದೆ ಸರ್ಕಾರ ಆರ್ಥಿಕ ನೆರವು ಸಿಕ್ಕಿದ್ದಲ್ಲಿ ಮತ್ತಷ್ಟು ಹೈಟೆಕ್ ಬೋಟ್ ಆ್ಯಂಬುಲೆನ್ಸ್ ತಯಾರು ಮಾಡಬಹುದು.
ಪಬ್ಲಿಕ್ ನೆಕ್ಸ್ಟ್ ವಿಶೇಷ ಸುದ್ದಿ: ವಿಶ್ವನಾಥ ಪಂಜಿಮೊಗರು
PublicNext
04/02/2026 12:18 pm