ಸಾಗರ:ಸಿಗಂದೂರು ರಸ್ತೆಯ ಅಲಿ ಪಬ್ಲಿಕ್ ಶಾಲೆಯ ಮುಂಭಾಗದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಿಂದ ಇಡೀ ಪ್ರದೇಶವೇ ಬೆಚ್ಚಿಬಿದ್ದಿದೆ. ಈ ಘಟನೆಯಲ್ಲಿ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾಗರದ ಸಿಗಂದೂರು ರಸ್ತೆಯಲ್ಲಿರುವ ಅಲಿ ಪಬ್ಲಿಕ್ ಶಾಲೆಯ ಮುಂಭಾಗದ ಕಸದ ರಾಶಿಯಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಬಿಸಿಲ ಧಾಳಿಗೆ ಒಣಗಿದ್ದ ಗಿಡಗಂಟಿಗಳಿಗೆ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ್ದು, ಆಕಾಶದತ್ತ ದಟ್ಟವಾದ ಹೊಗೆ ಆವರಿಸಿತ್ತು. ಘಟನಾ ಸ್ಥಳದ ಪಕ್ಕದಲ್ಲೇ ಪೆಟ್ರೋಲ್ ಬಂಕ್, ಶಾಲೆ ಮತ್ತು ವಸತಿ ನಿಲಯಗಳು ಇದ್ದಿದ್ದರಿಂದ ದೊಡ್ಡ ಮಟ್ಟದ ಸ್ಫೋಟ ಸಂಭವಿಸುವ ಭೀತಿ ಎದುರಾಗಿತ್ತು.
ಈ ಅಗ್ನಿ ಅವಘಡದ ಮಧ್ಯೆ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಮಹಿಳೆಗೆ ಬೆಂಕಿ ತಗುಲಿದ್ದು, ಅವರ ಪ್ರಾಣಕ್ಕೆ ಅಪಾಯ ಎದುರಾಗಿತ್ತು.
ಆದರೆ, ಸ್ಥಳೀಯರಾದ ಮಂಜುನಾಥ, ನವೀನ್ ಮತ್ತು ಜೋಸೆಫ್ ಲೋಬೊ ಅವರ ಸಮಯಪ್ರಜ್ಞೆ ಮೆರೆದಿದ್ದಾರೆ. ಸಾರ್ವಜನಿಕರ ಸಹಕಾರದೊಂದಿಗೆ ತಕ್ಷಣವೇ ಮಹಿಳೆಯನ್ನು ರಕ್ಷಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಇವರ ಈ ಧೈರ್ಯಕ್ಕೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಬೆಂಕಿ ಪಕ್ಕದ ಪೆಟ್ರೋಲ್ ಬಂಕ್‌ಗೆ ಹರಡಿದ್ದರೆ ಪರಿಸ್ಥಿತಿ ಊಹಿಸಲೂ ಅಸಾಧ್ಯವಾಗುತ್ತಿತ್ತು. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ.
ಒಟ್ಟಿನಲ್ಲಿ ಸಾಗರದ ಜನತೆ ಇಂದು ಒಂದು ಭೀಕರ ದುರಂತದಿಂದ ಪಾರಾಗಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆ ಮತ್ತು ಅಗ್ನಿಶಾಮಕ ದಳದ ತುರ್ತು ಸ್ಪಂದನೆ ಇವತ್ತು ಒಂದು ಜೀವವನ್ನು ಉಳಿಸಿದೆ.
ಜಮೀಲ್ ಸಾಗರ್ ಪಬ್ಲಿಕ್ ನೆಕ್ಸ್ಟ್ ಸಾಗರ
Kshetra Samachara
10/03/2026 05:21 pm
LOADING...