ಶಿವಮೊಗ್ಗ : ನಗರದ ಅಕ್ಕಮಹಾದೇವಿ ವೃತ್ತದಲ್ಲಿ ಆಂಬ್ಯುಲೆನ್ಸ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯ ಮತ್ತು ಸರ್ಕಲ್ ನಲ್ಲಿ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ.
ಮಾರ್ಚ್ 19ರ ಮಧ್ಯಾಹ್ನ 12:47ಕ್ಕೆ ಅಪಘಾತ ಸಂಭವಿಸಿದೆ. ರವೀಂದ್ರ ನಗರ ಗಣಪತಿ ದೇವಸ್ಥಾನದ ಕಡೆಯ ರಸ್ತೆಯ ಸಿಗ್ನಲ್ ಆಗಷ್ಟೇ ಬಿಟ್ಟಿತ್ತು. ಹಾಗಾಗಿ ಕಾರು ಸರ್ಕಲ್ ದಾಟಿ ರೈಲ್ವೆ ನಿಲ್ದಾಣದ ಕಡೆಗೆ ಸಾಗುತ್ತಿತ್ತು. ಇದೇ ವೇಳೆ ಸವಳಂಗ ರಸ್ತೆಯ ಫ್ಲೈ ಓವರ್ ಇಳಿದು ಬಂದ ಆಂಬ್ಯುಲೆನ್ಸ್ ಅತಿ ವೇಗವಾಗಿ ಅಕ್ಕಮಹಾದೇವಿ ಸರ್ಕಲ್‌ಗೆ ನುಗ್ಗಿದೆ.
ಆಂಬ್ಯುಲೆನ್ಸ್ ಸರ್ಕಲ್ ಮಧ್ಯದಲ್ಲಿ ಅಳವಡಿಸಿರುವ ಸಿಗ್ನಲ್ ಸುತ್ತಿಕೊಂಡು ಬಂದಿದ್ದರೆ ಅಪಘಾತ ತಪ್ಪುವ ಸಾಧ್ಯತೆ ಇತ್ತು. ಆದರೆ ಚಾಲಕ ಏಕಾಏಕಿ ಬಲಕ್ಕೆ ತಿರುಗಿಸಿದ್ದಾನೆ. ಹಾಗಾಗಿ ಆಂಬ್ಯುಲೆನ್ಸ್ ನೇರವಾಗಿ ಕಾರಿಗೆ ಡಿಕ್ಕಿ ಹೊಡೆದಿದೆ.
ಆಂಬ್ಯುಲೆನ್ಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಬಲಭಾಗಕ್ಕೆ ತಿರುಗಿ ಪಲ್ಟಿಯಾಗಿದೆ. ಅಲ್ಲದೆ ಉಲ್ಟಾ ಬಿದ್ದು ಒಂದು ಸುತ್ತು ಸುತ್ತಿದೆ. ಹಿಂಬದಿಯ ಗಾಜು ಒಡೆದಿದ್ದು ಅಲ್ಲಿಂದಲೇ ಮಹಿಳೆ ಹೊರ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇತ್ತ ಕಾರಿಗೆ ಡಿಕ್ಕಿ ಹೊಡೆದ ಬಳಿಕ ಆಂಬ್ಯುಲೆನ್ಸ್ ಒಂದು ಬಾರಿ ಮೇಲಕ್ಕೆ ಹಾರಿ ನಿಂತಿದೆ. ನಂತರ ಸರ್ಕಲ್ ಮಧ್ಯದ ಸಿಗ್ನಲ್ ಲೈಟ್‌ಗೆ ಡಿಕ್ಕಿ ಹೊಡೆದು ನಿಂತಿದೆ.
PublicNext
20/03/2026 08:02 pm
LOADING...