ಬೆಳಗಾವಿ: ಬೇಸಿಗೆ ಇನ್ನೂ ಸರಿಯಾಗಿ ಆರಂಭವಾಗಿಲ್ಲ. ಆದರೂ ಬೆಳಗಾವಿಯಲ್ಲಿ ಈಗಾಗಲೇ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗುತ್ತಿದೆ ಎಂದು ಆರೋಪಿಸಿ ರೊಚ್ಚಿಗೆದ್ದ ಸ್ಥಳೀಯರು ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ನಗರದ ವಡಗಾಂವ ರೈತ ಗಲ್ಲಿ ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ನಿವಾಸಿಗಳ ಆರೋಪದ ಪ್ರಕಾರ ಮನೆಗಳಿಗೆ ಬರುತ್ತಿರುವ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗುತ್ತಿದೆ. ಇದರಿಂದ ಜನರು ಆ ನೀರನ್ನು ಬಳಸಲು ಸಹ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಕಳೆದ ಇಪ್ಪತ್ತು ದಿನಗಳಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಈವರೆಗೂ ಸಮಸ್ಯೆ ಪರಿಹರಿಸುವ ಕೆಲಸ ಮಾಡಿಲ್ಲ ಎಂದು ಆರೋಪಿಸಿ ಜನರು ಇಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಚರಂಡಿ ನೀರು ಮಿಶ್ರಿತ ಕುಡಿಯುವ ಒಂದೆಡೆಯಾದರೆ ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಪಾಲಿಕೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು ಖಾಲಿ ಕೊಡಗಳೊಂದಿಗೆ ಪಾಲಿಕೆ ಕಚೇರಿಗೆ ಆಗಮಿಸಿದ ನೂರಾರು ಮಹಿಳೆಯರು, ರೈತರು ಮಹಾನಗರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಇದೇ ವೇಳೆ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಮಹಿಳೆಯರು ಯತ್ನಿಸಿದರು. ಈ ವೇಳೆ ಬಾಗಿಲಿನಲ್ಲೇ ಪೊಲೀಸರು ಅವರನ್ನು ತಡೆದು ಮನವೊಲಿಸುವ ಕೆಲಸ ಮಾಡಿದ್ದಾರೆ.
ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿದರು. ಮಾರ್ಕೆಟ್ ಸಿಪಿಐ ಜೆಎಂ ಕಾಲಿಮಿರ್ಚಿ ಹಾಗೂ ಪಿಎಸ್ಐ ವಿಠ್ಠಲ ಹಾವನ್ನವರ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಲು ಪ್ರಯತ್ನಿಸಿದರು. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಕಮಿಷನರ್ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ಈ ವೇಳೆ ಮಾತನಾಡಿ ಮಹಿಳೆಯರು, ನಿವಾಸಿಗಳು ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ.ಜೊತೆಗೆ ಕುಡಿಯುವ ನೀರಿಗೆ ಚರಂಡಿ ಮಿಶ್ರಿತ ನೀರು ಸೇರುತ್ತಿರುವುದರಿಂದ ಜನರಿಗೂ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
PublicNext
10/03/2026 09:03 pm