ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬದುಕು ಅಮೂಲ್ಯ, ಆತ್ಮಹತ್ಯೆ ಪರಿಹಾರವಲ್ಲ : ನಗುವಿನ ಹಿಂದೆ ಅಡಗಿದ 'UK07 ರೈಡರ್' ನೋವು

ಪ್ರಸಿದ್ಧ ಹಿಂದಿ ಯೂಟ್ಯೂಬರ್ ಹಾಗೂ ಮೋಟೋವ್ಲಾಗರ್ ಅನುರಾಗ್ ದೊಭಲ್, 'UK07 ರೈಡರ್' ಎಂಬ ಹೆಸರಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಮನೆಮಾತಾಗಿದ್ದಾರೆ. ಇತ್ತೀಚೆಗೆ ನಡೆದ ಒಂದು ದುಃಖಕರ ಘಟನೆಯಿಂದ ಅವರು ತಮ್ಮ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ್ದಾರೆ. ಈ ಘಟನೆ ಕೇವಲ ಒಂದು ಅಪಘಾತವಷ್ಟೇ ಅಲ್ಲದೆ, ಇಂದಿನ ಸಮಾಜದಲ್ಲಿ ಮಾನಸಿಕ ಆರೋಗ್ಯದ ಮಹತ್ವ ನೆನಪಿಸುವ ಎಚ್ಚರಿಕೆಯ ಕರೆಗಂಟೆಯಾಗಿದೆ.

ಹೌದು 2026ರ ಮಾರ್ಚ್ 7ರಂದು, ಅನುರಾಗ್ ದೆಹಲಿ–ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಚಲಾಯಿಸುತ್ತಾ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಪ್ರಸಾರ ಮಾಡಿದ್ದರು. ಆ ಕ್ಷಣದಲ್ಲಿ ಸುಮಾರು 70,000 ದಿಂದ 80,000 ಜನರು ಈ ಲೈವ್ ಅನ್ನು ವೀಕ್ಷಿಸುತ್ತಿದ್ದರು. ಭಾವನಾತ್ಮಕವಾಗಿ ಕಳವಳಗೊಂಡಂತೆ ಕಾಣಿಸಿಕೊಂಡ ಅವರು, ತಮ್ಮ ಜೀವನದ ನೋವು, ಒಂಟಿತನ ಮತ್ತು ವೈಯಕ್ತಿಕ ಸಂಕಷ್ಟಗಳ ಬಗ್ಗೆ ಮಾತನಾಡುತ್ತಿದ್ದಾಗ, ವೀಕ್ಷಕರ ಮನಸ್ಸನ್ನು ಕಲಕಿದ್ದರು.

ಕುಟುಂಬದ ಕುರಿತು ಭಾವನಾತ್ಮಕವಾಗಿ ಮಾತನಾಡುತ್ತಿದ್ದ ಅವರ ಮಾತುಗಳು ಮನಸ್ಸಿನ ನೋವನ್ನು ಸ್ಪಷ್ಟವಾಗಿ ಬಿಂಬಿಸುತ್ತಿದ್ದವು. ಕೆಲವೇ ಕ್ಷಣಗಳಲ್ಲಿ, ಅವರ ಟೊಯೋಟಾ ಫಾರ್ಚುನರ್ ಕಾರು ವೇಗವಾಗಿ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಯಿತು. ಈ ಘಟನೆ ನಡೆಯುತ್ತಿದ್ದಂತೆಯೇ ಲೈವ್ ಸ್ಟ್ರೀಮ್ ಸ್ಥಗಿತಗೊಂಡಿತು. ಈ ಆಘಾತಕಾರಿ ದೃಶ್ಯವನ್ನು ಕಂಡ ಸಾವಿರಾರು ವೀಕ್ಷಕರು ತೀವ್ರ ಆತಂಕಕ್ಕೆ ಒಳಗಾದರು.

ಅಪಘಾತ ಸಂಭವಿಸಿದ ಕೂಡಲೇ, ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅನುರಾಗ್‌ರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಅನುರಾಗ್, ತಮ್ಮ ಅಂತರಜಾತಿ ವಿವಾಹಕ್ಕೆ ಸಂಬಂಧಿಸಿದಂತೆ ಕುಟುಂಬದ ಒತ್ತಡ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಯೂಟ್ಯೂಬ್‌ನಲ್ಲಿ ಬೈಕ್ ಪ್ರಯಾಣ ಮತ್ತು ಜೀವನಶೈಲಿ ವಿಡಿಯೋಗಳ ಮೂಲಕ ಜನಪ್ರಿಯರಾಗಿದ್ದ ಅವರು ಆದ್ರೆ ಸೂಸೈಡ್ ಮಾಡಿಕೊಳ್ಳಲು ಮುಂದಾದ ಅವರ ನಡೆ ಸಾವಿರಾರು ಯುವ ಅಭಿಮಾನಿಗಳ ಮನಸ್ಸಿನ ಮೇಲೂ ಇದು ಗಂಭೀರ ಪರಿಣಾಮ ಬೀರಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯರಾದ ವ್ಯಕ್ತಿಗಳು ಎದುರಿಸುವ ಒತ್ತಡಗಳು, ಕೆಲವೊಮ್ಮೆ ಅವರೊಳಗಿನ ನೋವನ್ನು ಮರೆಮಾಚಿ ಹೊರ ಜಗತ್ತಿಗೆ ನಕಲಿ ನಗು ತೋರಲು ಪ್ರೇರೇಪಿಸುತ್ತವೆ. ಜೀವನದಲ್ಲಿ ಸಮಸ್ಯೆಗಳು, ಒತ್ತಡಗಳು ಮತ್ತು ನಿರಾಶೆಗಳು ಎದುರಾಗುವುದು ಸಹಜ. ಆದರೆ, ಆ ನೋವನ್ನು ಒಬ್ಬರೇ ಅನುಭವಿಸುವುದಕ್ಕಿಂತ, ಸ್ನೇಹಿತರು, ಕುಟುಂಬದ ಸದಸ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಮಾತನಾಡುವುದು ಅತ್ಯಂತ ಅಗತ್ಯ. ಅಗತ್ಯವಿದ್ದಾಗ ಥೆರಪಿ ಅಥವಾ ಕೌನ್ಸೆಲಿಂಗ್‌ಗೆ ಹೋಗುವುದು ಮನಸ್ಸಿಗೆ ಸರಿಯಾದ ದಾರಿಯನ್ನು ತೋರಿಸಬಲ್ಲದು. ಏಕೆಂದರೆ ಇದು ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ನಿಭಾಯಿಸಲು ಸಹಾಯ ಮಾಡುತ್ತದೆ.

ಈ ಘಟನೆ ನಮಗೆಲ್ಲರಿಗೂ ಒಂದು ಗಂಭೀರ ಸಂದೇಶವನ್ನು ರವಾನಿಸುತ್ತದೆ. ಜೀವನದಲ್ಲಿ ಸಮಸ್ಯೆಗಳು, ಒತ್ತಡಗಳು ಮತ್ತು ನೋವುಗಳು ಪ್ರತಿಯೊಬ್ಬರಿಗೂ ಎದುರಾಗುತ್ತವೆ. ಆದರೆ,ಆತ್ಮಹತ್ಯೆ ಎಂದಿಗೂ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಒಂದು ಕ್ಷಣದ ನಿರಾಶೆ ಅಥವಾ ನೋವು ಜೀವನದ ಸಂಪೂರ್ಣ ಮೌಲ್ಯವನ್ನು ನಿರ್ಧರಿಸಬಾರದು.

ಯಾರಾದರೂ ಸಂಕಷ್ಟದಲ್ಲಿದ್ದರೆ, ದಯವಿಟ್ಟು ಒಬ್ಬರೇ ಹೋರಾಡಬೇಡಿ. ಸ್ನೇಹಿತರೊಂದಿಗೆ ಮಾತನಾಡಿ, ಕುಟುಂಬದವರೊಂದಿಗೆ ನಿಮ್ಮ ನೋವನ್ನು ಹಂಚಿಕೊಳ್ಳಿ. ಅಗತ್ಯವಿದ್ದರೆ ಥೆರಪಿ ಅಥವಾ ಕೌನ್ಸೆಲಿಂಗ್ ಸಹಾಯವನ್ನು ಪಡೆಯಲು ಹಿಂಜರಿಯಬೇಡಿ. ಬದುಕು ಅಮೂಲ್ಯವಾದದ್ದು...

ವರದಿ: ರಾಧಿಕಾ ದೇಸಾಯಿ ಕೆಎಲ್‌ಇ ಕಾಲೇಜ್‌ ವಿದ್ಯಾರ್ಥಿನಿ

Edited By : Nirmala Aralikatti
PublicNext

PublicNext

11/03/2026 03:42 pm

Cinque Terre

25.42 K

Cinque Terre

1

ಸಂಬಂಧಿತ ಸುದ್ದಿ