ಮಂಗಳೂರು: ಕೆಲಸಕ್ಕೆ ತೆರಳಿ ವಾಪಸ್ಸಾಗದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮೇಶ್ವರ ಕೆರೆಯಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.
ಕೊಣಾಜೆ ಗ್ರಾಮ ಮುಚ್ಚಿಲಕೋಡಿ ಮನೆ ನಿವಾಸಿ ದಿನೇಶ್ ಶೆಟ್ಟಿಗಾರ್ ಅವರ ಪುತ್ರ ವಿವೇಕ್ ಶೆಟ್ಟಿಗಾರ್ (32) ಮೃತದೇಹವಾಗಿ ಪತ್ತೆಯಾದವರು.
ಮಂಗಳೂರಿನ ಕದ್ರಿ ಬಳಿಯಿರುವ ಮೊಟಾರ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿವೇಕ್ ಮಾ. 9ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಅಂದು ರಾತ್ರಿ 9.30ಕ್ಕೆ ತಾಯಿಗೆ ಕರೆ ಮಾಡಿ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು.
ಆದರೆ ರಾತ್ರಿ 12ಗಂಟೆಯಾದರೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ ಆದರೆ ಅವರು ಕರೆ ಸ್ವೀಕರಿಸಿಲ್ಲ. ಮಾರ್ಚ್ 10ರಂದು ಕೂಡ ಮೊಬೈಲ್‌ಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕ ವಿವೇಕ್ ಕೆಲಸ ಮಾಡುತ್ತಿದ್ದ ಕಂಪೆನಿಗೆ ಕರೆ ಮಾಡಿ ವಿಚಾರಿಸಿದಾಗ ಕಂಪೆನಿ ಬಂದ್ ಆಗಿರುವುದಾಗಿ ತಿಳಿದು ಬಂದಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಬುಧವಾರ ಸೋಮೇಶ್ವರ ಕೆರೆಯಲ್ಲಿ ವಿವೇಕ್ ಶೆಟ್ಟಿಗಾರ್ ಅವರ ಮೃತದೇಹ ಪತ್ತೆಯಾಗಿದ್ದು, ವಿವೇಕ್ ತಮ್ಮ ಸ್ಕೂಟರನ್ನು ಸೋಮೇಶ್ವರ ರಥದ ಕೊಠಡಿ ಸಮೀಪ ನಿಲ್ಲಿಸಿದ್ದು ಕಂಡುಬಂದಿದೆ. ಅಲ್ಲಿಯೇ ಅವರ ಮೊಬೈಲ್ ಫೋನ್ ಹಾಗೂ ಚಪ್ಪಲಿಗಳನ್ನು ಇಟ್ಟು ಅವರು ನಾಪತ್ತೆಯಾಗಿರುವುದು ತಿಳಿದುಬಂದಿದೆ.
ವಿವೇಕ್ ಶೆಟ್ಟಿಗಾರ್‌ಗೆ 8 ತಿಂಗಳ ಹಿಂದೆ ವಿಚ್ಛೇದನವಾಗಿತ್ತು. ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಾಗಿದೆ.
Kshetra Samachara
11/03/2026 10:02 pm
LOADING...