ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಬಕವಿ-ಬನಹಟ್ಟಿ : ಯಮಸಲ್ಲೇಖನ ವೃತ - ಸಮಾಧಿ ಮರಣ ಹೊಂದಿದ ಆರ್ಯಿಕಾ 105 ಶ್ರೀಭಕ್ತಿಭೂಷಣಮತಿ ಮಾತಾ

ರಬಕವಿ-ಬನಹಟ್ಟಿ : ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಯಮಸಲ್ಲೇಖನ ವೃತ ಸ್ವೀಕರಿಸಿದ್ದ ಮಹಾರಾಷ್ಟ್ರ ಮೂಲದ ಜೈಸಿಂಗಪುರದ ನಿವಾಸಿ ಆರ್ಯಿಕಾ 105 ಶ್ರೀಭಕ್ತಿಭೂಷಣಮತಿ ಮಾತಾಜಿ (90) ಗುರುವಾರ ಮಧ್ಯಾಹ್ನ ಸಮಾಧಿ ಮರಣ ಹೊಂದಿದರೆಂದು ಎಂದು ಜೈನಮುನಿ ಆಚಾರ್ಯ ಶ್ರೀ 108 ಕುಲರತ್ನಭೂಷಣ ಮಹಾರಾಜರು ತಿಳಿಸಿದರು.

ಗುರುವಾರ ಭದ್ರಗಿರಿ ಬೆಟ್ಟದಲ್ಲಿ ಮಾತಾಜಿಯವರ ಸಮಾಧಿ ಮರಣದ ವಿಧಿವಿಧಾನಗಳು ಜೈನ ಸಂಪ್ರದಾಯದಡಿ ಪೂರ್ಣಗೊಂಡ ಬಳಿಕ ಮಾತನಾಡಿ, ಜೈನ ಮುನಿಗಳು ಮತ್ತು ಆರ್ಯಿಕಾ ಅವರು ಕೈಗೊಳ್ಳುವ ಅತ್ಯಂತ ಕಠಿಣ ವ್ರತ ಯಮಸಲ್ಲೇಖನ ವೃತವಾಗಿದೆ. ಮೋಕ್ಷ ಅಥವಾ ಸದ್ಗತಿಗಾಗಿ ಶರೀರ ತ್ಯಾಗ ಮಾಡುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳುತ್ತಾರೆ.

ಕಳೆದ 8 ದಿನಗಳ ಹಿಂದೆ ಯಮಸಲ್ಲೇಖನ ವ್ರತ ಸ್ವೀಕರಿಸಿ ಗುರುವಾರ ಸಮಾಧಿ ಮರಣ ಹೊಂದಿದ ಆರ್ಯಿಕಾ 105 ಶ್ರೀಭಕ್ತಿಭೂಷಣಮತಿಯವರ ಅಂತಿಮ ದಹನಕ್ರಿಯೆ ವಿಧಿವಿಧಾನಗಳು ಜೈನ ಧರ್ಮದ ಸಂಪ್ರದಾಯದಂತೆ ಮೆರವಣಿಗೆ ಮೂಲಕ ಮಾಡಿ ಭದ್ರಗಿರಿ ಬೆಟ್ಟದ ಪ್ರದೇಶದಲ್ಲಿ ನಡೆಸಲಾಯಿತು. ಕಳೆದ ವರ್ಷವೂ ಕೂಡಾ ಇವರ ಪತಿದೇವರು ಸಹ ಇದೇ ಸ್ಥಳದಲ್ಲಿ ಯಮಸಲ್ಲೇಖನ ಸ್ವೀಕರಿಸಿ ಇಚ್ಚಾಮರಣ ಹೊಂದಿದ್ದರು.

ಯಮ ಸಲ್ಲೇಖನ (ಅಥವಾ ಸಲ್ಲೇಖನ ವ್ರತ) ಜೈನ ಧರ್ಮದಲ್ಲಿನ ಅತ್ಯುನ್ನತ ತ್ಯಾಗದ ಆಚರಣೆಯಾಗಿದ್ದು, ಸಾವಿನ ಸನ್ನಿಹಿತದಲ್ಲಿ ಆಹಾರ ಮತ್ತು ನೀರನ್ನು ಹಂತ ಹಂತವಾಗಿ ತ್ಯಜಿಸಿ ದೇಹತ್ಯಾಗ ಮಾಡುವುದಾಗಿದೆ. ಇದು ಮೋಕ್ಷಕ್ಕಾಗಿ ಕೈಗೊಳ್ಳುವ ಧಾರ್ಮಿಕ ವ್ರತವಾಗಿದ್ದು, ಜೈನ ಧರ್ಮೀಯರು ತಮ್ಮ ಜೀವನದ ಅಂತಿಮ ಹಂತದಲ್ಲಿ ತೃಪ್ತಿಯಿಂದ ವೃತ ಕೈಗೊಳ್ಳುತ್ತಾರೆ ಎಂದರು.

ದೇಹದ ಅವಶ್ಯಕತೆ ಇಲ್ಲದಿದ್ದಾಗ ಅಥವಾ ಅಂತಿಮ ದಿನಗಳು ಬಂದಾಗ, ಮನಸ್ಸನ್ನು ಗಟ್ಟಿಗೊಳಿಸಿ ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಆಹಾರ, ಲೇಹ, ಪೇಯ, ಸ್ವಾದ್ಯ ಮತ್ತು ಖಾದ್ಯಗಳನ್ನು ತ್ಯಜಿಸಿ, ಕ್ರಮೇಣ ದ್ರವ ಆಹಾರವನ್ನೂ ನಿಲ್ಲಿಸಿ ಮಾತಾಜಿಯವರು ಸಮಾಧಿ ಮರಣ ಹೊಂದಿದರು. ಇದು ಆತ್ಮದ ಉನ್ನತಿಗಾಗಿ ಮತ್ತು ಜನ್ಮ-ಮರಣದ ಚಕ್ರದಿಂದ ಮುಕ್ತಿ ಪಡೆಯಲು ಜೈನ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ ಎಂದರು.

ಯಾರು ಜೀವನದಲ್ಲಿ ತನ್ನ ಜೀವಿತದ ಎಲ್ಲಾ ಉದ್ದೇಶಗಳನ್ನು ಈಡೇರಿಸಿರುವ ತೃಪ್ತಿ ಹೊಂದಿರುತ್ತಾರೋ, ಇನ್ನು ಈ ದೇಹದ ಮೂಲಕ ಯಾವುದೇ ಉದ್ದೇಶಗಳೂ ಈಡೇರುವ ಅಗತ್ಯವಿಲ್ಲವೆಂದು ಅನಿಸುತ್ತದೋ ಅಂಥವರು ಮಾತ್ರ ಸಂತಾರಾ ಅಥವಾ ಸಲ್ಲೇಖನ ವ್ರತವನ್ನು ಕೈಗೊಳ್ಳುತ್ತಾರೆ. ಜೈನ ಸಮುದಾಯದ ಆದಿಯಿಂದಲೂ ಸಲ್ಲೇಖನ ವ್ರತ ಇದೆ. ಜೈನರು ಸಲ್ಲೇಖನ ಕೈಗೊಳ್ಳುವುದಕ್ಕೆ ಮತ್ತೊಂದು ಪ್ರಧಾನ ಕಾರಣವೆಂದರೆ ಅದು ಕರ್ಮ. ಆಹಾರ ಸೇವನೆಯೂ ಸೇರಿ ಜೈನರ ನಂಬಿಕೆಯ ಪ್ರಕಾರ ಪ್ರತಿಯೊಂದೂ ಕ್ರಿಯೆಯೂ ಕರ್ಮಕ್ಕೆ ಸಂಬಂಧಿಸಿದ್ದಾಗಿದೆ. ಸಸ್ಯಗಳಿಗೂ ಜೀವವಿದೆ ಎಂದು ನಂಬಿರುವ ಜೈನರು ತರಕಾರಿ, ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ನೋವಾಗುತ್ತದೆ ಎಂದು ಭಾವಿಸತ್ತಾರೆ. ಹೀಗಾಗಿ ಅವುಗಳ ಸೇವನೆಯೂ ವಜ್ರ್ಯವೆನ್ನಿಸಿದೆ. ಸಸ್ಯಾಹಾರ ಸೇವನೆಯಿಂದ ಸಸ್ಯಗಳಿಗೆ ನೋವನ್ನು ಉಂಟು ಮಾಡಿದಂತೆ. ನೀರಿನಲ್ಲಿಯೂ ಸೂಕ್ಷ್ಮ ಜೀವಿಗಳಿರುವುದರಿಂದ ನೀರು ಕುಡಿಯುವುದು ಕೂಡ ನಕಾರಾತ್ಮಕ ಕರ್ಮಕ್ಕೆ ಕಾರಣ ಎಂಬುದು ಸಲ್ಲೇಖನ ಕೈಗೊಂಡವರ ನಂಬಿಕೆಯಾಗಿರುತ್ತದೆ. ದೇಹ ತ್ಯಾಗದ ವೇಳೆ ಹಳೆಯ ಕರ್ಮದ ಪಾಪದಿಂದ ದೇಹವನ್ನು ಶುದ್ಧೀಕರಿಸಿ ಮೋಕ್ಷ ಸಾಧಿಸಲು ಜೈನ ಧರ್ಮಿಯರು ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದಲೂ ಜನ ಸಾವಿರಾರು ಸಂಖ್ಯೆಯಲ್ಲಿ ಜೈನ ಧರ್ಮದ ಶ್ರಾವಕ-ಶ್ರಾವಕಿಯರು ಹಿರಿಯರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

13/03/2026 07:27 pm

Cinque Terre

1.76 K

Cinque Terre

0