ಗುಂಡ್ಲುಪೇಟೆ: ಶನಿವಾರ ರಾತ್ರಿ ಗುಂಡ್ಲುಪೇಟೆ ಮತ್ತು ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ ಬರುತ್ತಿದ್ದ ಪಟ್ಟಣದ ವೀರನಪುರ ಕಾಲೋನಿಯ 27 ವರ್ಷದ ಪ್ರವೀಣ್, ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಬೌಂಡರಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನೊಂದು ಘಟನೆಯಲ್ಲಿ, ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದ ಬಳಿ ಕೆಎಲ್ 12 ಕ್ಯೂ 5548 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದರೂ, ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟಿಪ್ಪರ್‌ಗಳ ಅಕ್ರಮ ಸಂಚಾರ: ಸಾರ್ವಜನಿಕರ ಜೀವಕ್ಕೆ ಕುತ್ತು
ಈ ಅಪಘಾತಗಳ ಬೆನ್ನಲ್ಲೇ, ರಾತ್ರಿ ವೇಳೆ ಟಿಪ್ಪರ್ ಲಾರಿಗಳ ಸಂಚಾರ ಹೆಚ್ಚಳದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಹಗಲಿನಲ್ಲಿ ನಿಯಮ ಉಲ್ಲಂಘಿಸಿ ಸಂಚರಿಸುವ ಕೇರಳ ನೋಂದಣಿ ಟಿಪ್ಪರ್‌ಗಳು, ಈಗ ರಾತ್ರಿ ವೇಳೆಯಲ್ಲೂ ಎಗ್ಗಿಲ್ಲದೆ ಅಬ್ಬರಿಸುತ್ತಿವೆ. ರಾತ್ರೋರಾತ್ರಿ ನಡೆಯುವ ಈ ಅಕ್ರಮ ದಂಧೆಯಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ರಾಜಧನ ವಂಚನೆಯಾಗುತ್ತಿದೆ. ಅಕ್ರಮದ ಮಾಹಿತಿ ಇದ್ದರೂ ಸಹ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರೋಕ್ಷವಾಗಿ ಕೇರಳಿಗರ ಬೆನ್ನುತಟ್ಟುತ್ತಿರುವುದು ಸಾರ್ವಜನಿಕರ ಪ್ರಾಣಕ್ಕೆ ಸಂಚಾಕಾರ ತಂದೊಡ್ಡಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಗುಂಡ್ಲುಪೇಟೆ.
PublicNext
15/03/2026 01:00 pm