ಕೊಪ್ಪಳ: ಕೊಪ್ಪಳ ತಾಲೂಕಿನ ಇರಕಲ್ ಗಡ ಸಮೀಪದ ಕೊಡದಾಳ ಸೀಮಾದಲ್ಲಿ ಮನಕಲಕುವ ಘಟನೆಯೊಂದು ವರದಿಯಾಗಿದೆ. ಆಹಾರ ಮತ್ತು ನೀರಿಗಾಗಿ ಜಮೀನೊಂದಕ್ಕೆ ನುಗ್ಗಲು ಪ್ರಯತ್ನಿಸಿದ ಕರಡಿಯೊಂದು ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ದಾರುಣವಾಗಿ ಸಾವನ್ನಪ್ಪಿದೆ. ಈ ಘಟನೆ ಇಂದು ನಸುಕಿನಲ್ಲಿ ಜರುಗಿದೆ.
ಬೇಸಿಗೆಯ ತೀವ್ರತೆಯಿಂದಾಗಿ ಆಹಾರ ಹಾಗೂ ನೀರಿಗಾಗಿ ಕಾಡು ಬಿಟ್ಟು ನಾಡಿಗೆ ಬರುತ್ತಿರುವ ವನ್ಯಜೀವಿಗಳಿಗೆ ಈ ಘಟನೆ ಮತ್ತೊಂದು ಸೇರ್ಪಡೆಯಾಗಿದೆ. ಕೊಪ್ಪಳ ತಾಲೂಕಿನ ಇರಕಲ್ ಗಡ ಸಮೀಪದ ಕೊಡದಾಳ ಸೀಮಾದ ರೈತ ಭೀಮಣ್ಣ ಅವರ ಜಮೀನಿಗೆ ನುಗ್ಗಲು ಪ್ರಯತ್ನಿಸಿದ ಕರಡಿ, ಜಮೀನಿನ ಬಳಿಯಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಪರ್ಶದಿಂದಾಗಿ ತೀವ್ರವಾಗಿ ಒದ್ದಾಡಿ ಜೀವಬಿಟ್ಟಿದೆ. ಈ ಘಟನೆ ಇಂದು ಬೆಳಗಿನ ಜಾವ ಸರಿಸುಮಾರು 4 ಗಂಟೆಗೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅರಣ್ಯ ಇಲಾಖೆ ಕ್ರಮ
ಕೊಡದಾಳ ಗ್ರಾಮದ ರೈತ ಭೀಮಣ್ಣ ಅವರು ಇಂದು ಬೆಳಿಗ್ಗೆ ತಮ್ಮ ಜಮೀನಿಗೆ ಹೋದಾಗ ಕರಡಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ವಲಯ ಅರಣ್ಯ ಅಧಿಕಾರಿ ಜಡಿಯಪ್ಪ ಸ್ಥಳಕ್ಕೆ ಭೇಟಿ ನೀಡಿ, ಕರಡಿಯ ಪಂಚನಾಮೆ ನಡೆಸಿ, ನಂತರ ಅಂತ್ಯಕ್ರಿಯೆ ನೆರವೇರಿಸಿದರು.
ನಿರ್ಲಕ್ಷ್ಯದ ಆರೋಪ
ಯಲಬುರ್ಗಾ ತಾಲೂಕಿನ ಗುನ್ನಾಳ ಸೀಮಾದಲ್ಲಿ ಈ ಹಿಂದೆ ಅನಾರೋಗ್ಯದಿಂದ ಕರಡಿಯೊಂದು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ, ಮತ್ತೊಂದು ಕರಡಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವುದು ಸ್ಥಳೀಯರ ಹಾಗೂ ವನ್ಯಜೀವಿ ಸಂರಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗಳಿಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅವರು ತೀವ್ರವಾಗಿ ಆರೋಪಿಸಿದ್ದಾರೆ.
ಹೆಚ್ಚುತ್ತಿರುವ ಕರಡಿ ಹಾವಳಿ ಮತ್ತು ಬೇಡಿಕೆಗಳು
ಇರಕಲ್ ಗಡ ಭಾಗದಲ್ಲಿ ಕರಡಿಗಳ ಸಂತತಿ ಹೆಚ್ಚಾಗಿದ್ದು, ಇದರಿಂದ ಕರಡಿಗಳ ಹಾವಳಿಯೂ ವಿಪರೀತವಾಗಿದೆ. ರೈತರು ಮತ್ತು ಸಾರ್ವಜನಿಕರ ಮೇಲೆ ಕರಡಿಗಳು ದಾಳಿ ಮಾಡಿದ ಹಲವು ನಿದರ್ಶನಗಳಿವೆ. ಈ ಭಾಗದಲ್ಲಿ ಕರಡಿ ಸಂರಕ್ಷಣಾ ವಲಯ ಸ್ಥಾಪಿಸುವಂತೆ ಅರಣ್ಯ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಅವರು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಕತ್ತಲಾದರೆ ಸಾಕು, ಆಹಾರ ಅರಸಿ ಹಿಂಡು ಹಿಂಡಾಗಿ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶಮಾಡುತ್ತಿವೆ. ಶಾಸಕ ಜನಾರ್ದನರೆಡ್ಡಿ ಅವರು ಕಾಯ್ದಿಟ್ಟ ಅರಣ್ಯದಲ್ಲಿ ಕರಡಿ ಧಾಮ ನಿರ್ಮಿಸುವುದಾಗಿ ಭರವಸೆ ನೀಡಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ರೈತರ ಆಗ್ರಹ
ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು, ಕರಡಿಗಳ ಸಂರಕ್ಷಣೆಗೆ ಹಾಗೂ ರೈತರ ಬೆಳೆ ಮತ್ತು ಜೀವ ಉಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
PublicNext
17/03/2026 10:40 am