ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಪತ್ತು ಬಂದಾಗಲ್ಲ, ಮುಂಚೆಯೇ ಜಾಗೃತರಾಗಿ! ಗದಗದಲ್ಲಿ ಜೀವ ಉಳಿಸುವ ಮಹಾಪಾಠ

ಗದಗ: ವಿಪತ್ತು ಸಂಭವಿಸಿದಾಗ ಕ್ಷಣಾರ್ಧದಲ್ಲೇ ಸರಿಯಾದ ಕ್ರಮ ಕೈಗೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಜನರಿಗೆ ಮನದಟ್ಟು ಮಾಡುವ ಉದ್ದೇಶದಿಂದ ವಿಪತ್ತು ನಿರ್ವಹಣಾ ಪ್ರಾತ್ಯಕ್ಷಿಕೆಯನ್ನು ಬುಧವಾರದಂದು ಗದುಗಿನ ಕೆ ಎಚ್ ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮ ಜನರಲ್ಲಿ ವಿಶೇಷ ಆಸಕ್ತಿ ಮೂಡಿಸಿತು.

ಪ್ರಾತ್ಯಕ್ಷಿಕೆಯ ಪ್ರಮುಖ ಆಕರ್ಷಣೆ ಎಂದರೆ ಕಮಲೇಶ್ ಸಿಂಗ್ ನೇತೃತ್ವದ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡದ ಕಾರ್ಯಚಟುವಟಿಕೆ. ಜಿಲ್ಲಾಸ್ಪತ್ರೆಯ ಒಂದು ಭಾಗದಲ್ಲಿ ಕಟ್ಟಡ ಕುಸಿದಂತೆ ಅಣಕು ಪರಿಸ್ಥಿತಿ ನಿರ್ಮಿಸಿ, ಅದರೊಳಗೆ ಸಿಲುಕಿರುವವರನ್ನು ರಕ್ಷಿಸುವ ಕಾರ್ಯವನ್ನು ನೈಜ ರೀತಿಯಲ್ಲಿ ಪ್ರದರ್ಶಿಸಲಾಯಿತು.ತಂಡವು ವಿಶೇಷ ಸಾಧನಗಳನ್ನು ಬಳಸಿ ಅವಶೇಷಗಳೊಳಗಿನ ಜೀವಂತ ವ್ಯಕ್ತಿಗಳನ್ನು ಪತ್ತೆಹಚ್ಚುವುದು, ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆದು ತುರ್ತು ಚಿಕಿತ್ಸೆಗಾಗಿ ಸಾಗಿಸುವ ಕ್ರಮಗಳನ್ನು ಹಂತ ಹಂತವಾಗಿ ತೋರಿಸಿತು. ಪ್ರತಿ ಹಂತದಲ್ಲೂ ಸಮಯ ನಿರ್ವಹಣೆ ಮತ್ತು ತಂಡದ ಸಂಯೋಜನೆ ಎಷ್ಟು ಮುಖ್ಯ ಎಂಬುದನ್ನು ಸ್ಪಷ್ಟಪಡಿಸಲಾಯಿತು.

ಇದರ ಜೊತೆಗೆ, ಪ್ರಾತ್ಯಕ್ಷಿಕೆ ವೇಳೆ ಸಾರ್ವಜನಿಕರಿಗೆ ಪ್ರಮುಖ ಸೂಚನೆಗಳನ್ನು ನೀಡಲಾಯಿತು. ಕಟ್ಟಡ ಕುಸಿದಾಗ ಗಾಬರಿಯಾಗದೆ ಸುರಕ್ಷಿತ ಸ್ಥಳಕ್ಕೆ ಸರಿಯುವುದು. ತಕ್ಷಣ ತುರ್ತು ಸೇವೆಗಳಿಗೂ ಮಾಹಿತಿ ನೀಡುವುದು. ಅವಶೇಷಗಳ ಬಳಿ ಅನಗತ್ಯವಾಗಿ ಗುಂಪಾಗದೆ ರಕ್ಷಣಾ ಕಾರ್ಯಕ್ಕೆ ಸಹಕರಿಸುವುದು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲ ವಿಧಾನಗಳ ಕುರಿತು ವಿವರಿಸಲಾಯಿತು.

ವೈದ್ಯಕೀಯ ಕಾಲೇಜು ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾತ್ಯಕ್ಷಿಕೆಯನ್ನು ಕುತೂಹಲದಿಂದ ವೀಕ್ಷಿಸಿದರು. ವಿದ್ಯಾರ್ಥಿಗಳಿಗೆ ಇದು ನೈಜ ಕಲಿಕೆಯ ಮಹತ್ವದ ಅನುಭವವಾಗಿತ್ತು.ಈ ಕಾರ್ಯಕ್ರಮದ ಮೂಲಕ “ವಿಪತ್ತು ಬಂದಾಗ ಮಾತ್ರ ಸಿದ್ಧರಾಗುವುದಕ್ಕಿಂತ ಮುಂಚೆಯೇ ಜಾಗೃತರಾಗಬೇಕು” ಎಂಬ ಸಂದೇಶವನ್ನು ಜಿಲ್ಲಾಡಳಿತ ಹಾಗೂ ಎನ್ ಡಿ ಆರ್ ಎಫ್ ಸ್ಪಷ್ಟವಾಗಿ ಸಾರಿತು.ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕಾರ್ಯಕ್ರಮದಲ್ಲಿ ಮಾತನಾಡಿ, “ವಿಪತ್ತುಗಳು ಯಾವಾಗ ಬೇಕಾದರೂ ಸಂಭವಿಸಬಹುದು.

ಆದರೆ ಅದಕ್ಕೆ ನಾವು ಸಿದ್ಧರಾಗಿದ್ದರೆ ನಷ್ಟವನ್ನು ಕಡಿಮೆ ಮಾಡಬಹುದು. ಜೀವ ಹಾನಿ ತಡೆಯಬಹುದು ಇದರಲ್ಲಿ ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ” ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರೆಗೌಡ್ರ, ಪ್ರಾಚಾರ್ಯ ರೇಖಾ ಸೇನಾವಣೆ, ವಿಪತ್ತು ತಜ್ಞ ಶಿವಾನಂದ ರಾಜನಾಳ, ವಸಂತ ಮಡ್ಲೂರ, ಎನ್ ಡಿ ಆರ್ ಎಫ್ ಮುಖ್ಯಸ್ಥ ಕಮಲೇಶ್ ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/03/2026 08:50 pm

Cinque Terre

2.62 K

Cinque Terre

0

ಸಂಬಂಧಿತ ಸುದ್ದಿ