ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು: ನೂರಾರು ಎಕರೆ ಶೋಲಾ ಹುಲ್ಲುಗಾವಲು ಭಸ್ಮ

ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಅಪರೂಪದ ಶೋಲಾ ಹುಲ್ಲುಗಾವಲುಗಳು ಸದ್ಯ ಬಿಸಿಲಿನ ಧಗೆ ಹಾಗೂ ಕಿಡಿಗೇಡಿಗಳ ಕೃತ್ಯದಿಂದಾಗಿ ಬೆಂಕಿಗಾಹುತಿಯಾಗುತ್ತಿವೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ವಲಯದ ಮಾಣಿಕ್ಯಬೆಟ್ಟ ಮತ್ತು ವಾಲೀಕುಂಜಗಿರಿ ಶ್ರೇಣಿ ಸೇರಿದಂತೆ 25ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಈ ಅನಾಹುತದಿಂದಾಗಿ ನೆಲದಲ್ಲಿ ಗೂಡು ಕಟ್ಟುವ ಪಕ್ಷಿಗಳು, ವನ್ಯಜೀವಿಗಳು ಹಾಗೂ ಈ ಭಾಗದ ವಿಶಿಷ್ಟ ಸಸ್ಯಸಂಪತ್ತಿಗೆ ದೊಡ್ಡ ಮಟ್ಟದ ಹಾನಿಯಾಗಿದೆ.

ಈ ದುರಂತಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸ್ಥಳೀಯರು ಮತ್ತು ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ವೀಕ್ಷಕರನ್ನು ನೇಮಕ ಮಾಡಿಕೊಳ್ಳದಿರುವುದು, ಬೆಂಕಿ ನಿಯಂತ್ರಣ ರೇಖೆ ನಿರ್ಮಿಸದೇ ಇರುವುದು ಹಾಗೂ ವೀಕ್ಷಣಾ ಗೋಪುರಗಳ ಕೊರತೆಯೇ ಅನಾಹುತ ಇಷ್ಟೊಂದು ವಿಕೋಪಕ್ಕೆ ಹೋಗಲು ಕಾರಣ ಎನ್ನಲಾಗುತ್ತಿದೆ. ಕಳೆದ ಒಂದು ವಾರದಿಂದ ಕಾಡು ಹೊತ್ತಿ ಉರಿಯುತ್ತಿದ್ದರೂ ಕಾರ್ಕಳ ಡಿಎಫ್‌ಓ ಸೇರಿದಂತೆ ಯಾವುದೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ಗಡಿ ಹಂಚಿಕೊಂಡಿರುವ ಈ ಸೂಕ್ಷ್ಮ ಪ್ರದೇಶವನ್ನು ರಕ್ಷಿಸಲು ಅರಣ್ಯ ಸಚಿವರು ತಕ್ಷಣವೇ ಮಧ್ಯಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By :
PublicNext

PublicNext

20/03/2026 01:06 pm

Cinque Terre

13.28 K

Cinque Terre

0

ಸಂಬಂಧಿತ ಸುದ್ದಿ