ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪ್ರತಿಷ್ಠಿತ ಉದಯ್ ಪ್ರತಾಪ್ ಕಾಲೇಜು ಇಂದು ರಣರಂಗವಾಗಿ ಮಾರ್ಪಟ್ಟಿದೆ. ಹಗಲು ಹೊತ್ತಿನಲ್ಲೇ ಕಾಲೇಜು ಕ್ಯಾಂಪಸ್ ಒಳಗೆ ನುಗ್ಗಿದ ದುಷ್ಕರ್ಮಿಗಳು 23 ವರ್ಷದ ವಿದ್ಯಾರ್ಥಿಯ ಮೇಲೆ ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ಇಡೀ ಕಾಲೇಜು ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮೃತ ವಿದ್ಯಾರ್ಥಿಯನ್ನು ಗಾಜಿಪುರ ಮೂಲದ, ಬಿ.ಎಸ್ಸಿ ಓದುತ್ತಿದ್ದ ಸೂರ್ಯ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನೆಯ ಸಿಸಿಟಿವಿ ಮತ್ತು ಮೊಬೈಲ್ ದೃಶ್ಯಗಳು ಲಭ್ಯವಾಗಿದ್ದು, ಅವು ಮೈ ಜುಂ ಎನ್ನುವಂತಿವೆ. ವಿಡಿಯೋದಲ್ಲಿ ಸೂರ್ಯ ಪ್ರತಾಪ್ ಸಿಂಗ್ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವುದು ಮತ್ತು ಇತರ ವಿದ್ಯಾರ್ಥಿಗಳು ಗಾಬರಿಯಿಂದ ನೋಡುತ್ತಿರುವುದು ದಾಖಲಾಗಿದೆ.
ವಿದ್ಯಾರ್ಥಿಗಳು ಓಡುತ್ತಿರುವಾಗಲೇ ಸತತವಾಗಿ ಗುಂಡು ಹಾರಿಸಿದ ಶಬ್ದ ಕೇಳಿಬಂದಿದೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ರಕ್ಷಣೆಗಾಗಿ ತರಗತಿಗಳ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾರೆ. ಈ ಕೃತ್ಯ ಎಸಗಿದ ಆರೋಪಿಯನ್ನು ಬಿ.ಎ ಎರಡನೇ ವರ್ಷದ ವಿದ್ಯಾರ್ಥಿ ಮಂಜೀತ್ ಎಂದು ಗುರುತಿಸಲಾಗಿದೆ.
"ಮಂಜೀತ್ ಕೇವಲ ಗುಂಡು ಹಾರಿಸಿದ್ದು ಮಾತ್ರವಲ್ಲದೆ, ಅಲ್ಲಿದ್ದ ಇತರರಿಗೂ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಕೃತ್ಯಕ್ಕೆ ಬಳಸಿದ ಪಿಸ್ತೂಲನ್ನು ಕಸದ ರಾಶಿಯಲ್ಲಿ ಎಸೆದು ಹೋಗಿದ್ದಾನೆ," ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ದ್ವೇಷವೇ ಈ ಕೊಲೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಆರೋಪಿ ಮಂಜೀತ್ ಜೊತೆಗೆ ಇನ್ನೂ ಇಬ್ಬರು ಸಹಚರರು ಈ ದಾಳಿಯಲ್ಲಿ ಭಾಗಿಯಾಗಿರುವ ಶಂಕೆಯಿದೆ.
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಆರು ವಿಶೇಷ ತಂಡಗಳನ್ನು ರಚಿಸಲಾಗಿದೆ. ವಾರಣಾಸಿಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಹಂತಕರಿಗಾಗಿ ಬಲೆ ಬೀಸಲಾಗಿದೆ.
PublicNext
21/03/2026 08:35 am