ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪಾಚಿ ಬಳಿಸಿ ಬಯೋಲೂಪ್ ತಂತ್ರಜ್ಞಾನ ಆವಿಷ್ಕಾರ - ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

ಬೆಳಗಾವಿ: ಪಾಚಿ ಎಂದರೆ ಗಲೀಜು ಅಂತಾ ಭಾವಿಸುತ್ತೇವೆ. ಆದರೆ, ಇದೇ ಪಾಚಿಯನ್ನೆ ಬಳಸಿಕೊಂಡು ವಾತಾವರಣದಲ್ಲಿನ ಇಂಗಾಲ ಡೈಆಕ್ಸೈಡ್ ಹೀರಿಕೊಂಡು ಜೈವಿಕ ಇಂಧನ ಉತ್ಪಾದಿಸುವ "ಬಯೋಲೂಪ್" ಎಂಬ ವಿನೂತನ ತಂತ್ರಜ್ಞಾನವನ್ನು ಸಿದ್ಧಪಡಿಸುವ ಮೂಲಕ ಬೆಳಗಾವಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಾಷ್ಟ್ರದ ಗಮನ ಸೆಳೆದಿದ್ದಾರೆ.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಪ್ರಕುಲ್ ಹಿರೇಮಠ, ಹರ್ಷಿತ್ ಹಿರೇಮಠ, ಅಂಕಿತ ದಾಸನಕೊಪ್ಪ, ಸೂರಜ್ ಪಾಶ್ಚಾಪುರ ಮತ್ತು ಶ್ರೇಯಾ ಯರಗಟ್ಟಿಮಠ ಅವರನ್ನು ಒಳಗೊಂಡ ತಂಡವು, ಪ್ರಾಧ್ಯಾಪಕ ಡಾ. ಶಿವಾನಂದ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನಾ ಯೋಜನೆಯನ್ನು ಸಿದ್ಧಪಡಿಸಿದೆ. ಇದು ಸ್ಟಾರ್ಟ್‌ಅಪ್ ಕರ್ನಾಟಕದ ಎನ್ ಎಐಎನ್ 2.0 ಅಡಿ ಆಯ್ಕೆ ಆಗಿರುವುದು ವಿಶೇಷ.

ಇತ್ತೀಚೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆದ "ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್" 2026ರಲ್ಲಿ ಇವರ “ಬಯೋಲೂಪ್” ಸಂಶೋಧಕರು ಮತ್ತು ವಿಜ್ಞಾನಿಗಳಿಂದ ಮೆಚ್ಚುಗೆ ಗಳಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಪ್ರಕಟಿಸಿರುವ 'ಕೇಸ್ ಬುಕ್ ಆನ್ ರಿಯಲ್ ವರ್ಲ್ಡ್ ಇಂಪ್ಯಾಕ್ಟ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ ಎನರ್ಜಿ' ಸಂಚಿಕೆಯಲ್ಲಿ ಇವರ ಬಯೋಲೂಪ್ ಕುರಿತ ಲೇಖನ ಪ್ರಕಟವಾಗಿದೆ. 15 ಪ್ರಮುಖ ಎಐ-ಎನರ್ಜಿ ಕೇಸ್ ಸ್ಟಡಿಗಳಲ್ಲಿ ಈ ಯೋಜನೆ ಸೇರಿಸಲಾಗಿದ್ದು, ಈ ಸಮಿಟ್‌ಗೆ ವಿಶ್ವದ ವಿವಿಧ ಭಾಗಗಳಿಂದ ಸುಮಾರು 72 ಪ್ರಸ್ತಾವನೆಗಳು ಬಂದಿದ್ದವು.

ವಾತಾವರಣದಲ್ಲಿನ ಇಂಗಾಲ ಡೈಆಕ್ಸೈಡ್ ಹೀರಿಕೊಂಡು ಜೈವಿಕ ಇಂಧನ ಉತ್ಪಾದಿಸುವ ವಿನೂತನ ಪ್ರಾಯೋಗಿಕ ಮಾದರಿಯೇ ಬಯೋಲೂಪ್. ಪಾಚಿ ಆಧಾರಿತ ಫೋಟೋ ಬಯೋರಿಯಾಕ್ಟರ್ ತಂತ್ರಜ್ಞಾನವನ್ನು ಇದು ಹೊಂದಿದ್ದು, ಬಯೋರಿಯಾಕ್ಟರ್ ಒಳಗಿನ ಬೆಳಕು, ತಾಪಮಾನ, ಪೋಷಕಾಂಶಗಳ ಮಟ್ಟ ಅನಿಲ ವಿನಿಮಯ ಹಾಗೂ ಪಾಚಿ ಬೆಳವಣಿಗೆಯಂತಹ ಅಂಶಗಳನ್ನು ನಿರಂತರವಾಗಿ ಗಮನಿಸಿ ವಿಶ್ಲೇಷಿಸುವ ವ್ಯವಸ್ಥೆ ರೂಪಿಸಲಾಗಿದೆ. ಪಾಚಿ ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್ ಹೀರಿಕೊಂಡು ಜೈವಿಕ ಸಂಯುಕ್ತಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಈ ಪ್ರಕ್ರಿಯೆಯನ್ನು ಎಐ ತಂತ್ರಜ್ಞಾನಾಧಾರಿತವಾಗಿ ನಿಯಂತ್ರಿಸಿ, ಕಾರ್ಬನ್ ಡೈಆಕ್ಸೈಡ್ ಅನ್ನು ಜೈವಿಕ ಇಂಧನ ಅಥವಾ ಹಸಿರು ಹೈಡೋಜನ್ ಉತ್ಪಾದನೆಗೆ ಬಳಸುವ ತಾಂತ್ರಿಕತೆ ಇದಾಗಿದೆ. ಇದರಿಂದ ವಾತಾವರಣದ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆ ಮಾಡುವ ಜೊತೆಗೆ ಶುದ್ಧ ಇಂಧನ ಉತ್ಪಾದನೆ ಆಗಲಿದೆ. ಮಷಿನ್ ಲರ್ನಿಂಗ್ ಮಾದರಿಗಳ ಮೂಲಕ ರಿಯಾಕ್ಟರ್‌ನ ಸಾಮಾನ್ಯ ಕಾರ್ಯವಿಧಾನವನ್ನು ಗುರುತಿಸುವ ಈ ವ್ಯವಸ್ಥೆ ಯಾವುದೇ ಅಸಾಮಾನ್ಯ ಬದಲಾವಣೆ ಕಂಡುಬಂದಾಗ ತಕ್ಷಣ ಸೂಚನೆ ನೀಡುವುದಲ್ಲದೆ ಕೆಲವು ಕಾರ್ಯಾಚರಣೆಯನ್ನು ಸ್ವಯಂಚಾಲಿತವಾಗಿ ಸರಿ ಹೊಂದಿಸುವ ಸಾಮರ್ಥ್ಯವನ್ನೂ ಹೊಂದಿದೆ.

ವಾಯು ಮಾಲಿನ್ಯ ತಡೆಗಟ್ಟಲು ಮತ್ತು ಇಂಧನಕ್ಕಾಗಿ ಜಗತ್ತಿನ ಎಲ್ಲ ರಾಷ್ಟ್ರಗಳು ಹರಸಾಹಸ ಪಡುತ್ತಿವೆ. ಈ ಸಂದರ್ಭದಲ್ಲಿ ಈ ವಿದ್ಯಾರ್ಥಿಗಳು ಕಂಡು ಹಿಡಿದಿರುವ ಉಪಕರಣ ಒಮ್ಮೆ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿ, ಎಲ್ಲೆಡೆ ಅಳವಡಿಸಿದರೆ ವಾತಾವರಣವನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು. ಅಲ್ಲದೇ ಉತ್ಪಾದನೆಯಾದ ಜೈವಿಕ ಇಂಧನವನ್ನು ಗ್ಯಾಸ್, ವಾಹನಗಳಿಗೆ ಸೇರಿ ಇನ್ನಿತರ ಯಂತ್ರಗಳಿಗೆ ಬೇಕಾದ ಇಂಧನವಾಗಿ ಉಪಯೋಗಿಸಬಹುದು. ಈಗಿರುವ ಇಂಧನದಿಂದ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಆಗಿ, ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ. ಆದರೆ, ನಾವು ಸಂಶೋಧಿಸಿರುವ ಇಂಧನ ಬಳಸಿದರೆ ಯಾವುದೇ ಇಂಗಾಲ ಡೈಆಕ್ಸೈಡ್ ಬಿಡುಗಡೆ ಆಗುವುದಿಲ್ಲ. ಇದೊಂದು ಪರಿಸರ ಸ್ನೇಹಿ ಇಂಧನವಾಗಿದೆ ಎಂದು ಸಂಶೋಧನಾ ತಂಡವು ತಿಳಿಸಿದೆ.

ಇರಾನ್, ಇಸ್ರೇಲ್ ಹಾಗೂ ಅಮೆರಿಕಗಳ ನಡುವೆ ಯುದ್ಧ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂಧನಗಳ ಸಾಗಾಣಿಕೆಗೆ ಅಡ್ಡಿ ಉಂಟಾಗಿದೆ. ಇದರಿಂದಾಗಿ ವಿವಿಧ ದೇಶಗಳಲ್ಲಿ ಶಕ್ತಿಯ ಅಭಾವ ಎಷ್ಟಿದೆ ಎಂಬುದು ಗೊತ್ತಾಗುತ್ತಿದೆ. ಇಂಧನ ಕೊರತೆ ನೀಗಿಸುವ ದೃಷ್ಟಿಯಿಂದ ನಮ್ಮ ಶ್ರೀಮಠದ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನಾವೆಲ್ಲ ತ್ಯಾಜ್ಯ ಅಥವಾ ನಿರುಪಯುಕ್ತವೆಂದು ಭಾವಿಸುವ ಪಾಚಿಯನ್ನು ಶಕ್ತಿಯನ್ನಾಗಿ ಹಾಗೂ ಜೈವಿಕ ಇಂಧನವನ್ನಾಗಿ ಪರಿವರ್ತಿಸುವ ವಿಶೇಷ ಸಂಶೋಧನೆ ಕೈಗೊಂಡಿದ್ದಾರೆ. ಅತ್ಯಂತ ವಿನೂತನ ಹಾಗೂ ಪರಿಸರ ಸ್ನೇಹಿ ಸಂಶೋಧನೆ ಇದಾಗಿದ್ದು, ಆದಷ್ಟು ಬೇಗ ಪೇಟೆಂಟ್ ಸಿಕ್ಕು ಸದ್ಬಳಕೆ ಆದರೆ, ಇಂಧನಕ್ಕಾಗಿ ಪರದಾಡುವುದು ಕಡಿಮೆ ಆಗಲಿದೆ ಎಂದು ವಿದ್ಯಾರ್ಥಿಗಳ ಸಾಧನೆಯನ್ನು ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ಶ್ಲಾಘಿಸಿದರು.

Edited By : Vinayak Patil
PublicNext

PublicNext

21/03/2026 05:01 pm

Cinque Terre

5.93 K

Cinque Terre

0

ಸಂಬಂಧಿತ ಸುದ್ದಿ